ಪ್ರಿಸ್ಕ್ರಿಪ್ಷನ್ ದುರುಪಯೋಗದ ಹಿಂದೆ ದೊಡ್ಡ ಜಾಲ: ನಾಗರಾಜ್ ಕೆ.ವಿ.

Update: 2018-06-26 13:28 GMT

ಉಡುಪಿ, ಜೂ.26: ವೈದ್ಯರ ಔಷಧ ಚೀಟಿ(ಪ್ರಿಸ್ಕ್ರಿಪ್ಷನ್) ಇಲ್ಲದೆ ಮಾತ್ರೆ ಗಳನ್ನು ನೀಡುವುದು ಕಾನೂನಿನಲ್ಲಿ ಅಪರಾಧ. ಈ ಕುರಿತು ವೈದ್ಯರು ಕೂಡ ಎಚ್ಚರಿಕೆಯಿಂದ ಇರಬೇಕು. ವೈದ್ಯರ ಔಷಧ ಚೀಟಿ ದುರುಪಯೋಗ ಆಗದಂತೆ ನೋಡಿಕೊಳ್ಳಬೇಕು. ಇದರ ಹಿಂದೆ ದೊಡ್ಡ ಜಾಲವೇ ಇದೆ ಎಂದು ಉಡುಪಿ ವಿಭಾಗದ ಔಷಧ ನಿಯಂತ್ರಣ ಅಧಿಕಾರಿ ನಾಗರಾಜ್ ಕೆ.ವಿ. ತಿಳಿಸಿದ್ದಾರೆ.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಔಷಧ ನಿಯಂತ್ರಣ ಇಲಾಖೆ ಹಾಗೂ ಉಡುಪಿ ಜಿಲ್ಲಾ ಜೌಷಧ ಮಾರಾಟಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ಮತ್ತು ಅಕ್ರಮ ಮಾರಾಟ ವಿರೋಧಿ ದಿನದ ಅಂಗವಾಗಿ ಉಡುಪಿ ತಾಲೂಕಿನ ಔಷಧ ಮಾರಾಟಗಾರರಿಗೆ ಆಸ್ಪತ್ರೆಯ ಕಮಲ ಎ.ಬಾಳಿಗಾ ಸಭಾಂಗಣದಲ್ಲಿ ಮಂಗಳ ವಾರ ಆಯೋಜಿಸಲಾದ ಮಾದಕದ್ರವ್ಯ ವ್ಯಸನ ಮತ್ತು ಕಾನೂನು ಕಾರ್ಯಾ ಗಾರದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

 ಔಷಧಿ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಕೆಲಸಗಾರರು ಕೆಲವೊಮ್ಮೆ ಮಾಲಕರಿಗೆ ತಿಳಿಯದಂತೆ ಮಾತ್ರೆಗಳನ್ನು ವ್ಯಸನಿಗಳಿಗೆ ನೀಡುತ್ತಿರುವುದು ಗಮನಕ್ಕೆ ಬಂದಿದೆ. ವಿದೇಶಗಳಲ್ಲಿ ಅಫೀಮು ಗಾಂಜಾ ಸಿಗದಿದ್ದಾಗ ವ್ಯಸನಿಗಳು ಕೆಲವೊಂದು ವೈದ್ಯಕೀಯ ಮಾತ್ರೆಗಳನ್ನು ಸೇವಿಸುತ್ತಾರೆ. ಆದರೆ ನಮ್ಮ ದೇಶದಲ್ಲಿ ಈ ಮಾತ್ರೆಗಳು ವೈದ್ಯರ ಔಷಧಿ ಚೀಟಿ ಇಲ್ಲದೆ ಸಿಗುವುದರಿಂದ ಇದನ್ನೇ ತೆಗೆದುಕೊಳ್ಳುವ ಹಲವು ಜನರಿದ್ದಾರೆ. ಆದುದರಿಂದ ಈ ಬಗ್ಗೆ ಜಾಗೃತೆ ವಹಿಸಬೇಕು ಎಂದರು.

ಹಲವು ಜಿಲ್ಲೆಗಳಲ್ಲಿ ಔಷಧ ನಿಯಂತ್ರಣಾಧಿಕಾರಿಗಳು ಪೊಲೀಸರ ಮೂಲಕ ಔಷಧಿ ಅಂಗಡಿಗಳಿಗೆ ದಾಳಿ ನಡೆಸಿದ್ದಾರೆ. ಅಂತಹ ಸ್ಥಿತಿ ಉಡುಪಿಯಲ್ಲಿ ಆಗದಂತೆ ನೋಡಿಕೊಳ್ಳಬೇಕು. ಈ ವಿಚಾರದಲ್ಲಿ ಕೇವಲ ಔಷಧಿ ವ್ಯಾಪಾರಿಗಳನ್ನು ದೂರಿ ಪ್ರಯೋಜನವಿಲ್ಲ. ವೈದ್ಯರುಗಳು ಕೂಡ ಜಾಗರೂಕತೆಯಿಂದ ಇರಬೇಕು. ತಮ್ಮ ಔಷಧಿ ಚೀಟಿಗಳು ದುರುಪಯೋಗ ಆಗದಂತೆ ನೋಡಿ ಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಣಿಪಾಲ ಕೆಎಂಸಿಯ ಮಾನಸಿಕ ಆರೋಗ್ಯ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ.ಸಮೀರ ಪ್ರಹರಾಜ್ ಮಾತನಾಡಿ, ಮಾದಕದ್ರವ್ಯ ವ್ಯಸನ ಕೇವಲ ಭಾರತಕ್ಕೆ ಸೀಮತವಾಗಿರುವ ಸಮಸ್ಯೆಯಲ್ಲ. ಇಂದು ಇಡೀ ಜಗತ್ತನ್ನೇ ಈ ಸಮಸ್ಯೆ ಭಾದಿಸುತ್ತಿದೆ. ಮಕ್ಕಳು ಕೂಡ ಇಂದು ಇದಕ್ಕೆ ಬಲಿಯಾಗುತ್ತಿದ್ದಾರೆ. ಔಷಧಿ ಅಂಗಡಿಗಳಲ್ಲಿ ಸಿಗುವ ಕೆಲವೊಂದು ಮಾತ್ರೆಗಳನ್ನು ಕೂಡ ಮಾದಕದ್ರವ್ಯವಾಗಿ ಉಪಯೋಗಿಸಲಾಗುತ್ತಿದೆ. ಈ ವಿಚಾರದಲ್ಲಿ ಔಷಧಿ ಅಂಗಡಿ ಮತ್ತು ವೈದ್ಯರ ಮಧ್ಯೆ ಸಂವಹನ ಸರಿಯಾಗಿದ್ದರೆ ಅದನ್ನು ತಡೆಯಬಹುದು ಎಂದರು.

ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ. ಪಿ.ವಿ.ಭಂಡಾರಿ ವಹಿಸಿದ್ದರು. ಉಡುಪಿ ಜಿಲ್ಲಾ ಔಷಧ ಮಾರಾಟಗಾರ ಸಂಘದ ಅಧ್ಯಕ್ಷ ಮನೋಹರ ಶೆಟ್ಟಿ, ಕಾರ್ಯದರ್ಶಿ ವಿ.ಜೆ.ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋತಜ್ಞ ಡಾ.ದೀಪಕ್ ಮಲ್ಯ ಉಪಸ್ಥಿತರಿದ್ದರು.

ನಾಗೇಶ್ ಸೋಮಯಾಜಿ ಸ್ವಾಗತಿಸಿದರು. ಸೌಜನ್ಯ ಶೆಟ್ಟಿ ವಂದಿಸಿದರು. ಲೋಹಿತ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಮಾನ್ಯವಾಗಿ ಅವ ಲಂಬನೆಗೆ ಒಳಗಾಗುವ ಔಷಧಗಳು ಮತ್ತು ದುಷ್ಪರಿಣಾಮಗಳು ವಿಷಯದ ಕುರಿತು ಡಾ.ದೀಪಕ್ ಮಲ್ಯ, ವೈದ್ಯರ ಔಷಧಿ ಚೀಟಿ ಮತ್ತು ಅವಧಿ/ ವೈದ್ಯರ ಔಷಧಿ ಚೀಟಿಯಿಲ್ಲದೆ ನೀಡಬಾರದ ಔಷಧಿಗಳು ಮತ್ತು ಕಾನೂನು ಕುರಿತು ಡಾ.ಪಿ.ವಿ.ಭಂಡಾರಿ, ಸಾಮಾನ್ಯ ಮಾನಸಿಕ ರೋಗಗಳು ಮತ್ತು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಾಗರಾಜಮೂರ್ತಿ ಉಪನ್ಯಾಸ ನೀಡಿದರು.

ಮೊಬೈಲ್ ವ್ಯಸನ: ಡಾ.ಭಂಡಾರಿ ಎಚ್ಚರಿಕೆ
ಇಂದು ಪೋಷಕರಿಗೆ ಮಕ್ಕಳೊಂದಿಗೆ ಮಾತನಾಡಲು ಸಮಯವೇ ಇಲ್ಲ. ಮಕ್ಕಳ ಮಾತನ್ನು ಯಾರು ಕೂಡ ಕೇಳುತ್ತಿಲ್ಲ. ಹೀಗಾಗಿ ಮಕ್ಕಳು ಕೆಟ್ಟ ಚಟಗಳಿಗೆ ಬಲಿಯಾಗುತಿದ್ದಾರೆ. ಹೆಚ್ಚಿನ ಮಕ್ಕಳು ಮೊಬೈಲ್‌ಗಳ ದಾಸರಾಗುತ್ತಿದ್ದಾರೆ. ಈಗ ಇರುವ ಮಾದಕ ವ್ಯಸನದಂತೆ ಮುಂದೆ ಮಕ್ಕಳು ಮೊಬೈಲ್ ವ್ಯಸನಿಗಳಾಗುವ ಸಾಧ್ಯತೆಗಳಿವೆ ಎಂದು ಮನೋತಜ್ಞ ಡಾ.ಪಿ.ವಿ.ಭಂಡಾರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News