ದ.ಕ. ಜಿಲ್ಲಾ ಮಟ್ಟದ ಜನನ ಮರಣ ತ್ರೈಮಾಸಿಕ ಸಮನ್ವಯ ಸಮಿತಿ ಸಭೆ

Update: 2018-06-26 18:24 GMT

ಮಂಗಳೂರು, ಜೂ.26: ದ.ಕ. ಜಿಲ್ಲಾಮಟ್ಟದ ಜನನ ಮರಣ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯು ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್‌ರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಜನನ ಮರಣ ನೋಂದಣಿಯ ಕುರಿತು ಮಾತನಾಡಿದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉದಯ ಕುಮಾರ್ ದ.ಕ. ಜಿಲ್ಲೆಯಲ್ಲಿ 2017ನೇ ಸಾಲಿನಲ್ಲಿ 34,482 ಜನನಗಳು ಮತ್ತು 11,960 ಮರಣ ಸಹಿತ 40,442 ಘಟನೆಗಳು ಹಾಗೂ 268 ನಿರ್ಜೀವ ಘಟನೆಗಳು ನೋಂದಣಿಯಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ 366 ನೋಂದಣಿ ಘಟಕಗಳು ಹಾಗೂ 63 ಉಪನೋಂದಣಿ ಘಟಕಗಳು ಮತ್ತು ನಗರ ಪ್ರದೇಶದಲ್ಲಿ 10 ನೋಂದಣಿ ಘಟಕಗಳು ಹಾಗೂ 17 ಉಪನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದರು.

ಜನನ ಮರಣ ಮತ್ತು ನಿರ್ಜೀವ ಜನನಗಳ ವರದಿ ಮಾಡಲು ಕ್ರಮವಾಗಿ ನಮೂನೆ-1,2 ಮತ್ತು 3 ಪ್ರಪತ್ರಗಳಿವೆ. ಅವುಗಳಲ್ಲಿ ಕಾನೂನು ವಿಭಾಗ ಮತ್ತು ಸಾಂಖ್ಯಿಕ ವಿಭಾಗ ಎಂಬ ಎರಡು ವಿಭಾಗಗಳಿದೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಉದಯ ಕುಮಾರ್ ತಿಳಿಸಿದರು.

ಜನನ ಮರಣ ನೋಂದಣಿ ಕಾರ್ಯವು ಇ-ಜನ್ಮ ತಂತ್ರಾಂಶದ ಮುಖಾಂತರ ಗ್ರಾಮಾಂತರ ಪ್ರದೇಶದಲ್ಲಿ 2015ರ ಎಪ್ರಿಲ್ 1ರಿಂದ ಆರಂಭಿಸಲಾಯಿತು. ಗ್ರಾಮಮಟ್ಟದಲ್ಲಿ ಗ್ರಾಮಕರಣಿಕರು ಜನನ ಮರಣ ನೋಂದಣಾಧಿಕಾರಿಯಾಗಿದ್ದಾರೆ ಮತ್ತು ಎಲ್ಲಾ ಸರಕಾರಿ ಆಸ್ಪತ್ರೆಯ ವೈದ್ಯರು ಉಪನೋಂದಣಾಧಿಕಾರಿ ಆಗಿರುತ್ತಾರೆ. ಈಗಾಗಲೇ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಜನನ ಮರಣ ಉಪನೋಂದಣಿ ಘಟಕಗಳಲ್ಲಿ ಜನನ ಮರಣ ದೃಢಪತ್ರವನ್ನು ಸಾರ್ವಜನಿಕರಿಗೆ ನೇರವಾಗಿ ನೀಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರಲ್ಲದೆ, ಜನನ ಮರಣ ನೋಂದಣಿ ಅಧಿನಿಯಮ 1969ರಂತೆ 1ರಿಂದ 30ರವರೆಗಿನ ಪ್ರಕರಣವನ್ನು ಕಟ್ಟುನಿಟ್ಟಾಗಿ ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜನನ ಮರಣ ತಡನೋಂದಣಿ, ಜನನ ಮರಣಕ್ಕೆ ಸಂಬಂಧ ಪಟ್ಟ ಮೊಬಲಗನ್ನು ಪಾವತಿಸುವ ಬಗ್ಗೆ, ದತ್ತು ಮಕ್ಕಳ ಜನನ ನೋಂದಣಿ, ಜನನ ಮರಣ ನೋಂದಣಿಯ ವಿಶೇಷ ಮಾಸಿಕ ವರದಿ, ಜನನ ಮರಣ ನೋಂದಣಿ ಪ್ರಚಾರ ಹಾಗೂ ಜನನ ಮರಣ ಇ ಜನ್ಮ ತಂತ್ರಾಂಶದ ಮೂಲಕ ನೀಡಲಾಗುವ ಜನನ ಮರಣ ದೃಢಪತ್ರಗಳಿಗೆ ಕಡ್ಡಾಯವಾಗಿ ಹೋಲೋಗ್ರಾಮ್ ಅನ್ನು ಹಂಚುವಂತೆ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೂಚಿಸಿದರು.

2017ನೇ ಸಾಲಿನ ಜನನ ಮರಣ ಕಾನೂನು ಮಾಹಿತಿ ಭಾಗವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಗ್ರಾಮಾಂತರ ಪ್ರದೇಶದ ಉಪನೋಂದಣಿ ಘಟಕದವರು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರಿಗೆ ಹಾಗೂ ಪಟ್ಟಣ ಪ್ರದೇಶದ ಉಪನೋಂದಣಿ ಘಟಕದವರು ಸಂಬಂಧಪಟ್ಟ ಮುಖ್ಯಾಧಿಕಾರಿಗಳಿಗೆ ಸಲ್ಲಿಸಲು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News