ಇವಿಎಂ ತಿರಸ್ಕರಿಸಿ ನಮ್ಮ ಹಕ್ಕು ರಕ್ಷಿಸಿ:ಕಾಂಗ್ರೆಸ್‍ನಿಂದ ಕಾರ್ಡ್ ಚಳವಳಿ

Update: 2018-06-26 18:34 GMT

ಪುತ್ತೂರು,ಜೂ.26: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಕಾಂಗ್ರೆಸ್ ಇದೀಗ ತಮ್ಮ ಸೋಲಿಗೆ ಇವಿಎಂ ಕಾರಣವೆಂದು ಆರೋಪಿಸಿ 'ಇವಿಎಂ ತಿರಸ್ಕರಿಸಿ ನಮ್ಮ ಹಕ್ಕು ರಕ್ಷಿಸಿ' ಎಂಬ ಕಾರ್ಡ್‍ಚಳುವಳಿಯನ್ನು ನಡೆಸುತ್ತಿದ್ದು, ಸುಪ್ರಿಂ ಕೋರ್ಟ್‍ನ ನ್ಯಾಯಾಧೀಶರಿಗೆ ಕಾರ್ಡ್ ಬರೆದು ಎವಿಎಂ ತಿರಸ್ಕರಿಸುವಂತೆ ಕಾರ್ಡ್ ಮೂಲಕ ಮನವಿ ಸಲ್ಲಿಸಲು ಮುಂದಾಗಿದ್ದಾರೆ. 

ಭಾರತದ ಪ್ರಜೆಯಾಗಿ ಮತದಾನ ನನ್ನ ಸಂವಿಧಾನದ ಹಕ್ಕು, ನನ್ನ ಒಂದು ಮತ ದೇಶದ ಭವಿಷ್ಯಕ್ಕೆ ಮುಖ್ಯವಾಗಿದೆ. ಆದರೆ ಚುನಾವಣಾ ಯಂತ್ರದಿಂದಾಗಿ ನನ್ನ ಮತ ನನ್ನ ಪಕ್ಷಕ್ಕೆ ಹೋಗಿದೆಯೇ ಎಂಬ ಸಂಶಯ ಬಂದಾಗ... ನಮ್ಮ ಹಕ್ಕಿನ ರಕ್ಷಣೆ ಮಾಡಬೇಕಾದದ್ದು ಮಾನ್ಯ ಸುಪ್ರಿಂ ಕೋರ್ಟ್‍ನ ಕರ್ತವ್ಯ, ದಯಮಾಡಿ ಇವಿಎಂನ್ನು ತಿರಸ್ಕರಿಸಿ ನಮ್ಮ ಹಕ್ಕನ್ನು ರಕ್ಷಿಸಿ... ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. 

ಮಂಗಳವಾರ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಅಧ್ಯಕ್ಷ ಮುಹಮ್ಮದ್ ಬಡಗನ್ನೂರು ಅವರು ಇವಿಎಂ ತಿರಸ್ಕರಿಸಿ ನಮ್ಮ ಹಕ್ಕು ರಕ್ಷಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಕಾಂಗ್ರೆಸ್ ಗೆಲುವು ಪಡೆದ ಕ್ಷೇತ್ರಕ್ಕಿಂತಲೂ ಸೋಲು ಅನುಭವಿಸಿದ ಕ್ಷೇತ್ರಗಳು ಹೆಚ್ಚಾಗಿದೆ. ಇದರಿಂದಾಗಿ ಇವಿಎಂ ಮತಯಂತ್ರದ ಮೇಲೆ ಜನ ಸಾಮಾನ್ಯರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ನಾವು ಚಲಾಯಿಸಿದ ಹಕ್ಕನ್ನು ಖಾತ್ರಿ ಪಡಿಸಿಕೊಳ್ಳುವ ವ್ಯವಸ್ಥೆ ಬೇಕಾಗಿದ್ದು, ನ್ಯಾಯಾಂಗದ ಮೇಲೆ ನಂಬಿಕೆಯಿರುವ ಕಾರಣ ಈ ಆಂದೋಲನ ಆರಂಭಿಸಲಾಗಿದೆ ಎಂದರು. 

ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಉಮಾನಾಥ ಶೆಟ್ಟಿ ಮಾತನಾಡಿ, ಮತಪೆಟ್ಟಿಗೆ ಮೇಲೆ ವಿಶ್ವಾಸ ಇಟ್ಟಿದ್ದೇವು. ಆದರೆ ಇವಿಎಂ ಮತಯಂತ್ರ ವಿಶ್ವಾಸವನ್ನು ಕಳೆದುಕೊಂಡಿದೆ. ಚುನಾವಣಾ ಶಾಖೆಯ ಹೆಚ್ಚುವರಿ ಜಿಲ್ಲಾಧಿಕಾರಿ ಆಗಿದ್ದ ಜೆ.ಆರ್. ಲೋಬೋ ಅವರೇ ಮತಯಂತ್ರದ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನಾವು ಕೂಡ ಜಾಗೃತರಾಗುವ ಅಗತ್ಯ ಎದುರಾಗಿದೆ ಎಂದರು.

ಚುನಾವಣೆ ಮತ ಎಣಿಕೆ ದಿನ 11 ಗಂಟೆಗೆ ಬಿಜೆಪಿ ಕಾರ್ಯಕರ್ತರೊಬ್ಬರು, ನಾವು ಗೆದ್ದಾಯ್ತು ಎಂದು ಹೇಳುತ್ತಾರೆ. ಇದು ಹೇಗೆ ಸಾಧ್ಯ? ಇಲ್ಲೇ ಮತಯಂತ್ರದ ಮೇಲೆ ಅನುಮಾನ ಮೂಡಲು ಕಾರಣವಾಯ್ತು. ಪ್ರತಿ ಗ್ರಾಮ, ಬೂತ್‍ಗಳಿಗೂ ಮತಯಂತ್ರ ತಿರಸ್ಕರಿಸಿ ಆಂದೋಲನವನ್ನು ತಲುಪಿಸಬೇಕು. ಇದು ಒಬ್ಬೊಬ್ಬರಿಂದ ಆಗುವ ಕೆಲಸವಲ್ಲ. ಪ್ರತಿಯೊಬ್ಬರು ಇದಕ್ಕೆ ಕೈಜೋಡಿಸಬೇಕು. ವಿಧಾನಸಭೆ ಚುನಾವಣೆಯ ಸೋಲು ಕ್ಷಣಿಕ. ಮುಂದಿರುವ ಲೋಕಸಭೆ ಚುನಾವಣೆಗೆ ತಯಾರಿ ಆಗಬೇಕಿದೆ. ಒಗ್ಗಟ್ಟಿನಿಂದ ಎಲ್ಲರೂ ಕೆಲಸ ಮಾಡಬೇಕು ಎಂದು ಹೇಳಿದರು.

ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಸೇವಾದಳದ ತಾಲೂಕು ಸಂಘಟಕ ಜೋಕಿಂ ಡಿಸೋಜಾ, ಯುವ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಚುನಾವಣಾ ಉಸ್ತುವಾರಿಯಾಗಿದ್ದ ಎಂ.ಬಿ. ವಿಶ್ವನಾಥ ರೈ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯೂಸುಫ್ ಹಾಜಿ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ, ಮುಖಂಡರಾದ ಭಾಸ್ಕರ ಗೌಡ ಕೋಡಿಂಬಾಳ, ಇಸಾಕ್ ಸಾಲ್ಮರ, ಸಿದ್ದೀಕ್ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News