ಆ ‘ಶತಮಾನದ ಗೋಲಿಗೆ’ 32 ವರ್ಷ !

Update: 2018-06-26 18:35 GMT

ಅಂದು ಜೂನ್ 22, 1986. ನಾಲ್ಕು ವರ್ಷಗಳ ಹಿಂದಷ್ಟೇ ದ್ವೀಪವೊಂದರ ಒಡೆತನಕ್ಕಾಗಿ ಒಂದು ಸಣ್ಣ ಯುದ್ಧವನ್ನೇ ಮಾಡಿದ್ದ ಎರಡು ದೇಶಗಳು ಫಿಫಾ ವಿಶ್ವಕಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಪರಸ್ಪರ ಹಗೆಯಲ್ಲಿ ಎರಡೂ ತಂಡಗಳ ಫ್ಯಾನ್‌ಗಳು ಜೋರಾಗಿ ಅರಚುತ್ತಿದ್ದಾರೆ. ಅವೆರಡು ತಂಡಗಳು ಇಂಗ್ಲೆಂಡ್ ಮತ್ತು ಅರ್ಜೆಂಟೀನಾ.
ಮೊದಲ ಹಾಫ್ ಗೋಲಿಲ್ಲದೇ ಮುಗಿಯಿತು. ಎರಡನೇ ಹಾಫ್ ಆರಂಭ. 52ನೇ ನಿಮಿಷದಲ್ಲಿ ಆ ತಂಡದ 25ರ ಹುಡುಗ ಕಾಲ್ಚೆಂಡಿನಾಟದಲ್ಲಿ ಕೈಯನ್ನು ಬಳಸಿ ಗೋಲು ಗಳಿಸುತ್ತಾನೆ. ಅದು ವಿವಾದಾತ್ಮಕ ಗೋಲು. ಅದನ್ನು ಇಂದಿಗೂ ‘ಹ್ಯಾಂಡ್ ಆಫ್ ದಿ ಗಾಡ್ ಗೋಲ್’ ಎನ್ನುತ್ತಾರೆ.
ಅದಾದ 4 ನಿಮಿಷಕ್ಕೆ ಶುರುವಾಗುತ್ತದೆ ನೋಡಿ: ಫುಟ್‌ಬಾಲ್ ಆಟಕ್ಕೇ ಮೆರುಗು ತರುವ ಒಂದು ಸೊಬಗಿನ ಆಟ. ಅರ್ಜೆಂಟೀನಾ ಕಡೆಯ ಅರ್ಧ ವೃತ್ತದಲ್ಲಿ, ಹೆಚ್ಚೂ ಕಡಿಮೆ ಗೋಲು ಪೆಟ್ಟಿಗೆಗೆ ಸಮೀಪ ಇರುವ ಸ್ಥಳದಲ್ಲಿ ಅದೇ ಚಿಗರೆ ಓಟದವನ ಕಾಲಿಗೆ ಚೆಂಡು ಸಿಗುತ್ತದೆ. ಇಂಗ್ಲೆಂಡಿನ ನಾಲ್ವರು ಡಿಫೆನ್ಸ್ ಆಟಗಾರರು ಅವನನ್ನು ಸುತ್ತುವರಿದು ಚೆಂಡು ಕಿತ್ತುಕೊಳ್ಳಲು ಯತ್ನಿಸುತ್ತಾರೆ. ಆತ ತನ್ನ ತಂಡದವರಿಗೆ ಚೆಂಡು ಪಾಸ್ ಮಾಡಲಾಗದಂತೆ ಒಂದು ಕೋಟೆಯನ್ನು ಎದುರಾಳಿ ತಂಡ ನಿರ್ಮಿಸುತ್ತ ಹೋಗುತ್ತದೆ. ನಾಲ್ವರು ಡಿಫೆನ್ಸ್ ಆಟಗಾರರು, ಒಮ್ಮೆ ಒಬ್ಬರಾಗಿ, ಇನ್ನೊಮ್ಮೆ ಇಬ್ಬಿಬ್ಬರಾಗಿ ಹೀಗೇ ಅಡ್ಢ ಬರುತ್ತ ಚೆಂಡನ್ನು ಆತನ ಕಾಲಿನಿಂದ ಕಿತ್ತುಕೊಳ್ಳಲು ಹರಸಾಹಸ ಮಾಡುತ್ತಾರೆ. ತನ್ನ ಕೌಶಲ್ಯ, ತಂತ್ರಗಳನ್ನೆಲ್ಲ ಬಳಸುವ ಆ ಹುಡುಗ ಇಂಗ್ಲೆಂಡಿನ ಗೋಲುಪೆಟ್ಟಿಗೆಯ ಹತ್ತಿರವೇ ಬಂದಾಗ, ಕೊನೆಯ ಯತ್ನ ಎಂಬಂತೆ ಡಿಫೆನ್ಸ್ ಆಟಗಾರ ಮತ್ತೆ ಅಡ್ಡಿಪಡಿಸಲು ಯತ್ನಿಸುತ್ತಾನೆ. ತನ್ನ ತಂಡದವರಿಗೆ ಬಾಲ್ ಪಾಸ್ ಮಾಡಲಾಗದ ಸ್ಥಿತಿಯಲ್ಲಿರುವ ಈ ನಮ್ಮ ಹೀರೋ ಇಂತಹದ್ದೊಂದು ಸಾಧ್ಯತೆ ಉಂಟಾ ಎಂದವನೇ ಗೋಲ್ ಕೀಪರನ್ನು ಭೇದಿಸಿ ಚೆಂಡನ್ನು ಗೋಲು ಪೆಟ್ಟಿಗೆಯೊಳಕ್ಕೆ ಚಾಣಾಕ್ಷತನದಿಂದ ತಳ್ಳುತ್ತಾನೆ. ಅಲ್ಲಿಗೆ ಅಲ್ಲೊಂದು ಇತಿಹಾಸ ನಿರ್ಮಾಣವಾಗುತ್ತದೆ.
ಇದೆಲ್ಲ ಹತ್ತು-ಹನ್ನೆರಡು ಸೆಕೆಂಡುಗಳ ರೋಚಕ, ರೋಮಾಂಚಕ, ಸುವರ್ಣ ಸಂಭ್ರಮದ ಹೊತ್ತು. ಒಂದೂವರೆ ಲಕ್ಷದಷ್ಟಿದ್ದ ಪ್ರೇಕ್ಷಕರೆಲ್ಲ ಎದ್ದು ನಿಂತು ಭಾವುಕರಾಗಿ ಆ ಹುಡುಗನಿಗೆ ಅಭಿನಂದನೆ ಸಲ್ಲಿಸುತ್ತಾರೆ.
ಅದು ಫುಟ್‌ಬಾಲ್ ಗೆದ್ದ ದಿನವಾಗುತ್ತದೆ. ಆ ಗೋಲು ಇವತ್ತಿಗೂ ಶತಮಾನದ ಗೋಲು ಎಂದು ಖ್ಯಾತಿ ಪಡೆದಿದೆ.
ಇಂತಹ ಸುಂದರ ಸೊಬಗಿನ ಗೋಲನ್ನು ಹೊಡೆದವನ ಹೆಸರು ಡಿಯಾಗೊ ಮರಡೋನಾ! ಅರ್ಜೆಂಟಿನಾ ಆ ಪಂದ್ಯವನ್ನು 2-1ರಲ್ಲಿ ಗೆಲ್ಲುತ್ತದೆ. ಆ ವರ್ಷ ವಿಶ್ವಕಪ್ ಅನ್ನೂ ಗೆಲ್ಲುತ್ತದೆ. ಮುಂದೆ ಈ ಹುಡುಗ ಫುಟ್‌ಬಾಲ್‌ನ ದಂತಕತೆಯಾಗುತ್ತಾನೆ.
ಈ ಸಲದ ಫಿಫಾ 2018 ಕೂಡ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುತ್ತ್ತಾ ನಡೆದಿದೆ. ಮೊನ್ನೆ ಮೆಕ್ಸಿಕನ್ ಅಲೆಯಲ್ಲಿ ಜರ್ಮನಿ ಕೊಚ್ಚಿ ಹೋದರೆ, ಕ್ರೊಯೆಷಿಯಾ ಎದುರು ಅರ್ಜೆಂಟೀನಾ ಮಂಡಿಯೂರಿತು. ಆಟವೆಂದರೇನೇ ಹಾಗೆ. ನಾವು ಸವಿಯಬೇಕಷ್ಟೇ. ಯುವ ಆಟಗಾರರಲ್ಲಿ ಮರಡೋನಗಳನ್ನು ಹುಡುಕುತ್ತಾ ಸಂಭ್ರಮಿಸಬೇಕಷ್ಟೇ.

Writer - ಪಿ. ಕೆ. ಮಲ್ಲನಗೌಡರ್

contributor

Editor - ಪಿ. ಕೆ. ಮಲ್ಲನಗೌಡರ್

contributor

Similar News