ಜನಪ್ರತಿನಿಧಿಗಳ ಮೂರ್ಖತನ!

Update: 2018-06-26 18:41 GMT

ಮಾನ್ಯರೇ,

ಈ ಆಧುನಿಕ ಯುಗದಲ್ಲಿ ಇನ್ನೂ ಮೂಢನಂಬಿಕೆ ನಡೆಯುತ್ತಿವೆ ಎಂಬುದಕ್ಕೆ ಮಧ್ಯಪ್ರದೇಶದ ಚಿತ್ತರ್‌ಪುರದಲ್ಲಿರುವ ದೇವಾಲಯದಲ್ಲಿ ನಡೆದ ಕಪ್ಪೆಗಳ ವಿವಾಹದಲ್ಲಿ ಗ್ರಾಮದ ನೂರಾರು ಜನರು ಸೇರಿದ್ದರು ಎಂಬುವುದು ಉತ್ತಮ ಉದಾಹರಣೆಯಾಗಿದೆ. ಈ ಘಟನೆಯು ಇಂದು ನಾವು ಯಾವ ಕಾಲದಲ್ಲಿದ್ದೇವೆ ಎಂಬುವುದನ್ನು ಪ್ರಸ್ತುತಪಡಿಸುತ್ತದೆ.
ಮೂಢನಂಬಿಕೆಯಿಂದ ದಾರಿ ತಪ್ಪುತ್ತಿರುವ ಜನರನ್ನು ಮರಳಿ ವೈಚಾರಿಕತೆಯ ಹಾದಿಯಲ್ಲಿ ನಡೆಸುವಂತೆ ಮಾಡುವುದು ಜನಪ್ರತಿನಿಧಿಗಳ ಕರ್ತವ್ಯ. ಆದರೆ, ಮಧ್ಯಪ್ರದೇಶದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ರಾಜ್ಯ ಸಚಿವೆ ಲಲಿತಾ ಯಾದವ್‌ರವರೇ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಿಸಿ ತಮ್ಮ ‘ಬುದ್ಧಿಮತ್ತೆ’ಯನ್ನು ಮೆರೆದಿದ್ದಾರೆ. ಈ ಮೂಲಕ ಜನಪ್ರತಿನಿಧಿಗಳೇ ಜನರನ್ನು ಅನಾಗರಿಕತೆ ಯೆಡೆಗೆ ಕೊಂಡೊಯ್ಯುತ್ತಿದ್ದಾರೆ ಎಂಬುದು ಶೋಚನೀಯ ಸಂಗತಿ.

ಈ ವಿವಾಹವು ದೇವರನ್ನು ಸಂತುಷ್ಟಗೊಳಿಸುವ ಅತ್ಯಂತ ಪುರಾತನ ಪದ್ಧತಿಯಾಗಿದೆ ಎಂದು ಹೇಳುವುದು ಸಮರ್ಥನೆಯ ನುಡಿಗಳು. ಈ ಅಸಂಬದ್ಧವಾದ ಮಾತನ್ನು ಬಿಟ್ಟು, ವೈಜ್ಞಾನಿಕವಾಗಿ ಯೋಚಿಸಿದರೆ ಎಲ್ಲಾ ಸಮಸ್ಯೆಗೆ ಪರಿಹಾರ ಲಭ್ಯವಾಗುತ್ತದೆ ಎಂಬುದನ್ನು ಪ್ರಜಾಪ್ರತಿನಿಧಿಗಳು ಅರಿಯಬೇಕು. ಅವೈಜ್ಞಾನಿಕ ತಪ್ಪುಕಲ್ಪನೆಗೆ ಅವಕಾಶಕೊಟ್ಟು ಜನರನ್ನು ದಾರಿ ತಪ್ಪಿಸಿ, ತಾವೂ ಬಾವಿಗೆ ಬೀಳದಿರಿ. 

Writer - -ವೀರೇಶ್ ಗಂಗಾವತಿ

contributor

Editor - -ವೀರೇಶ್ ಗಂಗಾವತಿ

contributor

Similar News