ಘನತ್ಯಾಜ್ಯ ನಿರ್ವಹಣೆ: ಆ್ಯಂಟನಿ ಸಂಸ್ಥೆಗೆ ಎಚ್ಚರಿಕೆ ನೀಡಿದ ಮನಪಾ

Update: 2018-06-28 10:33 GMT

ಮಂಗಳೂರು, ಜೂ.28: ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ನಡೆಸುತ್ತಿರುವ ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ತಮಗೆ ಪಾವತಿ ಬಾಕಿ ಇದೆ ಎಂಬ ನೆಪದಲ್ಲಿ ಇನ್ನು ಮುಂದೆ ಮುಷ್ಕರ ನಡೆಸಿದ್ದಲ್ಲಿ ಸಂಸ್ಥೆಗೆ ನೀಡಲಾದ ಗುತ್ತಿಗೆಯನ್ನು ರದ್ದುಪಡಿಸುವುದಲ್ಲದೆ, ಪರ್ಯಾಯ ವ್ಯವಸ್ಥೆಯನ್ನು ಮಾಡಲು ಸಿದ್ಧವಾಗಿದೆ ಎಂದು ಸಂಸ್ಥೆಗೆ ಮಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಮೇಯರ್ ಭಾಸ್ಕರ್ ಮೊಯ್ಲಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ, ಆ್ಯಂಟನಿ ವೇಸ್ಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಕಾರ್ಮಿಕರು ಪದೇ ಪದೇ ಮುಷ್ಕರ ನಡೆಸಿ ಕಸ ವಿಲೇವಾರಿ ಮಾಡದಿರುವುದರಿಂದ ನಗರದಲ್ಲಿ ಸಮಸ್ಯೆಯಾಗುತ್ತಿರುವ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮನಪಾದಿಂದ ಸಂಸ್ಥೆಗೆ ಹಣ ಪಾವತಿ ಬಾಕಿ ಇರಿಸಿರುವುದರಿಂದ ಸಂಸ್ಥೆಯ ಕಾರ್ಮಿಕರು ಆಗಾಗ್ಗೆ ಮುಷ್ಕರ ನಡೆಸುತ್ತಿರುವುದಾಗಿ ಸಂಸ್ಥೆ ಹೇಳುತ್ತಿದೆ. ಮಹಾನಗರ ಪಾಲಿಕೆಯಿಂದ ಒಂದು ತಿಂಗಳ ಬಾಕಿ ಮಾತ್ರ ಪಾವತಿಯಾಗಬೇಕಿದೆ ಎಂದು ಹೇಳಲಾಗುತ್ತಿದೆ. ಹೀಗಿರುವಾಗ ರಾಷ್ಟ್ರೀಯ ಸಂಸ್ಥೆಯೊಂದು ಒಂದು ತಿಂಗಳ ಬಾಕಿಗಾಗಿ ಮನಪಾವನ್ನು ಬ್ಲಾಕ್‌ಮೇಲ್ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಸದಸ್ಯ ವಿಜಯ ಕುಮಾರ್ ಶೆಟ್ಟಿ ಸಭೆಯಲ್ಲಿ ಗಮನ ಸೆಳೆದರು.

ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸದಸ್ಯ ದಯಾನಂದ ಶೆಟ್ಟಿ ಆಗ್ರಹಿಸಿದರು. ನಗರದ ಒಳ ಪ್ರದೇಶಗಳಲ್ಲಿ ಕಸ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಮಾಜಿ ಮೇಯರ್ ಹರಿನಾಥ್ ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಮುಹಮ್ಮದ್ ನಝೀರ್, ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಎರಡು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿದೆ. ಮನೆಗಳಿಂದ ಕಸ ಸಂಗ್ರಹವನ್ನು ಆ್ಯಂಟನಿ ಸಂಸ್ಥೆ ನಡೆಸುತ್ತಿದ್ದು, ಯುನಿಕ್ ವೇಸ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಕರಣಾ ಕಾರ್ಯ ಮಾಡುತ್ತಿದೆ. ಆ್ಯಂಟನಿ ಸಂಸ್ಥೆಗೆ ಮಾಸಿಕ 2 ಕೋಟಿ ರೂ.ನಿಂದ 2.20 ಕೋಟಿ ರೂ. ಹಾಗೂ ಯುನಿಕ್ ಸಂಸ್ಥೆಗೆ 20ರಿಂದ 22 ಲಕ್ಷ ಸೇರಿ ಒಟ್ಟು ಮಾಸಿಕ 2.50 ಕೋಟಿ ರೂ.ಗಳನ್ನು ಮನಪಾದಿಂದ ಪಾವತಿಸಲಾಗುತ್ತಿದೆ. ಸಂಸ್ಥೆಯು ಹೇಳಿಕೊಂಡಿರುವಂತೆ 30 ಕೋಟಿ ರೂ. ಪಾವತಿಗೆ ಬಾಕಿ ಇಲ್ಲ ಎಂದರು.

ಮನಪಾ ಜತೆ ಆ್ಯಂಟನಿ ಸಂಸ್ಥೆಯವರು ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಅವರು ಕಸ ಸಂಗ್ರಹದ ಜತೆಗೆ ಯಂತ್ರದಲ್ಲಿ ರಸ್ತೆ ಗುಡಿಸುವ ಕಾರ್ಯ, ಒಂದು ಮೀಟರ್‌ಗಿಂತ ಅಧಿಕ ಆಳದ ಚರಂಡಗಳನ್ನು ಸ್ವಚ್ಛಗೊಳಿಸುವ ಕಾರ್ಯ, ಸಂಗ್ರಹಿಸಿದ ಕಸವನ್ನು ಪ್ರತ್ಯೇಕಿಸುವ ಕಾರ್ಯವನ್ನು ಮಾಡಬೇಕಾಗಿದೆ. ಇಂತಹ ಹಲವಾರು ನ್ಯೂನ್ಯತೆಗಳಿಂದ ಸಂಸ್ಥೆಯ ಕಾರ್ಯಾಚರಣೆ ಕೂಡಿರುವುದರಿಂದ ಮಾಸಿಕ ಬಿಲ್ ಪಾವತಿಯ ಸಂದರ್ಭ ದಂಡ ಹಾಗೂ ಕಡಿತವನ್ನು ಮಾಡಲಾಗುತ್ತಿದೆ. ಆ ಮೊತ್ತ 9 ಕೋಟಿ ರೂ.ಗಳಾಗಿವೆ. ಅದಕ್ಕಾಗಿ ಸಂಸ್ಥೆಯು ಈಗಾಗಾಲೇ ಜಿಲ್ಲಾಧಿಕಾರಿಗೆ ಆರ್ಬಿಟ್ರೇಶನ್ ಸಲ್ಲಿಸಿದೆ. ಅದಾಗ್ಯೂ ಅವರಿಗೆ 9 ಕೋಟಿ ರೂ.ನಲ್ಲಿ ಸಿಗಬೇಕಿರುವುದು 87 ಲಕ್ಷ ಮಾತ್ರ. ಉಳಿದಂತೆ ಸಂಸ್ಥೆಗೆ ಎಸ್ಕಲೇಶನ್ ವೆಚ್ಚವನ್ನು ನೀಡಬೇಕಾಗುತ್ತದೆ. ಅದರಂತೆ ಜನವರಿಯಲ್ಲಿ 4 ಕೋಟಿ 7 ಲಕ್ಷ ರೂ.ಗಳನ್ನು ನೀಡಲಾಗಿದ್ದು, ಇನ್ನು 5.50 ಕೋಟಿ ರೂ. ಎಸ್ಕಲೇಶನ್ ಶುಲ್ಕ ಮನಪಾದಿಂದ ಬಾಕಿ ಇದೆ. ಇದರ ಜತೆಗೆ ಮೇ ತಿಂಗಳ ಸುಮಾರು 2.25 ಕೋಟಿ ಸೇರಿ ಒಟ್ಟು ಪಾವತಿಗೆ ಬಾಕಿ ಇರುವುದು 7.75 ಕೋಟಿ ರೂ.ಗಳು ಮಾತ್ರ ಎಂದು ಆಯುಕ್ತರು ಸ್ಪಷ್ಟಪಡಿಸಿದರು.

ಈ ಬಾರಿ ಸಂಸ್ಥೆಯ ಕಾರ್ಮಿಕರು ಹಠಾತ್ತಾಗಿ ಹಣ ಪಾವತಿಯಾಗಿಲ್ಲವೆಂದು ಆಕ್ಷೇಪಿಸಿ ಮುಷ್ಕರ ಮಾಡಿದಾಗ ಒಂದು ದಿನ ಸಂಪೂರ್ಣ ನಗರದಲ್ಲಿ ತೊಂದರೆಯಾಗಿತ್ತು. ಮರುದಿನ ರಜಾ ದಿನವಾಗಿದ್ದರೂ ತಕ್ಷಣ ಮನಪಾ ತುರ್ತು ಸಭೆ ಮಾಡಿ ಹಳೆ ಗುತ್ತಿಗೆದಾರರನ್ನು ಒಟ್ಟುಗೂಡಿಸಿ ಕಸ ಸಂಗ್ರಹಕ್ಕೆ ವ್ಯವಸ್ಥೆ ಮಾಡಿ ಮಧ್ಯಾಹ್ನ ನಂತರ ಕೆಲವು ಕಡೆ ಸಂಗ್ರಹಿಸಲಾಯಿತು. ಆಗ ತಕ್ಷಣ ಎಚ್ಚೆತ್ತುಕೊಂಡ ಸಂಸ್ಥೆ ಕಾರ್ಮಿಕರು ಮುಷ್ಕರ ಹಿಂಪಡೆದು ಕಸ ಸಂಗ್ರಹಕ್ಕೆ ಮುಂದಾದರು. ಮುಂದೆ ಸಂಸ್ಥೆ ಮುಷ್ಕರ ನಡೆಸಿದ್ದಲ್ಲಿ ಅವರ ಗುತ್ತಿಗೆಯನ್ನು ರದ್ದುಪಡಿಸಲಾಗುವುದು. ಮಾತ್ರವಲ್ಲದೆ ಮನಪಾ ವತಿಯಿಂದ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗುವುದು ಎಂಬ ಕೊನೆ ಎಚ್ಚರಿಕೆಯನ್ನೂ ನೀಡಿರುವುದಾಗಿ ಆಯುಕ್ತರು ತಿಳಿಸಿದರು.

ಸಭೆಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ,  ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಲತಾ ಸಾಲ್ಯಾನ್, ರಾಧಾಕೃಷ್ಣ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News