11.07 ಕೋಟಿ ರೂ.ಗಳಿಗೆ ದ.ಕ. ಜಿಲ್ಲಾಧಿಕಾರಿಗೆ ಪ್ರಸ್ತಾವನೆ: ಮೇಯರ್

Update: 2018-06-28 09:58 GMT

ಮಂಗಳೂರು, ಜೂ.28: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೇ 29ರಂದು ಸುರಿದ ಭಾರಿ ಮಳೆಯಿಂದಾಗಿ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಪಾರ ಆಸ್ತಿ ಪಾಸ್ತಿಗಳಿಗೆ ತೊಂದರೆಯಾಗಿದೆ. ಪ್ರಾಥಮಿಕ ವರದಿ ಪ್ರಕಾರ ನಗರದಲ್ಲಿ 11.07 ಕೋಟಿ ರೂ. ಮೊತ್ತಕ್ಕೆ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮೇಯರ್ ಭಾಸ್ಕರ ಮೊಯ್ಲಿ ಹೇಳಿದರು.

ನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿಂದು ತಮ್ಮ ಪ್ರಥಮ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಗರ ವ್ಯಾಪ್ತಿಯಲ್ಲಿ ಮಳೆಹಾನಿಗೆ ಸಂಬಂಧಿಸಿ ಪರಿಹಾರ ಕೋರಿ 239 ಅರ್ಜಿಗಳು ಬಂದಿವೆ. 101 ಅರ್ಜಿಗಳ ಪರಿಶೀಲನೆ ನಡೆಸಿ ಪರಿಹಾರ ಮಂಜೂರು ಮಾಡಿ ವಿತರಣೆಗೆ ಕ್ರಮ ವಹಿಲಾಗಿದೆ ಎಂದು ಮೇಯರ್ ತಿಳಿಸಿದರು.

ರಾಜಕಾಲುವೆಗಳ ಒತ್ತುವರಿ ತೆರವು: ಜಿಲ್ಲಾಧಿಕಾರಿ ವರದಿ ನೀಡಿದಾಕ್ಷಣ ಕ್ರಮ

ಸಭೆಯ ಆರಂಭದಲ್ಲಿಯೇ ಸದಸ್ಯರು ಮೇ 29ರ ಮಹಾ ಮಳೆ ಸೇರಿದಂತೆ ಈವರೆಗಿನ ಮಳೆ ಹಾನಿ ಕುರಿತಂತೆ ಸಭೆಯ ಗಮನ ಸೆಳೆದರು.
ನಗರ ಪಾಲಿಕೆಯು ಒಳಚರಂಡಿಗಳನ್ನು ವೈಜ್ಞಾನಿಕವಾಗಿ ಸುವ್ಯವಸ್ಥೆಗೊಳಿಸುವ ಕಾರ್ಯ ಮಾಡಬೇಕು ಎಂದು ಸದಸ್ಯ ಪ್ರೇಮಾನಂದ ಶೆಟ್ಟಿ ಸಲಹೆ ನೀಡಿದರೆ, ಕೂಳೂರು ಪ್ರದೇಶದಲ್ಲಿ ರಾಜಕಾಲುವೆಯ ಒತ್ತುವರಿಗೆ ಸಂಬಂಧಿಸಿ ಎರಡು ವರ್ಷಗಳ ಹಿಂದೆಯೇ ತಾನು ದೂರು ನೀಡಿದ್ದರೂ ಕೆಲಸ ಆಗಿಲ್ಲ ಎಂದು ದಯಾನಂದ ಶೆಟ್ಟಿ ದೂರಿದರು.

ಇದೇ ವೇಳೆ ಮಹಾಬಲ ಮಾರ್ಲ, ಹರೀಶ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು, ಮಧು ಕಿರಣ್, ಆಶಾ ಡಿಸಿಲ್ವಾ, ರಾಜೇಶ್, ರತಿಕಲಾ, ಅಯಾಝ್, ಶಶಿಧರ ಹೆಗ್ಡೆ ಮೊದಲಾದವರು ಮಳೆಹಾನಿ ಹಾಗೂ ರಾಜಕಾಲುವೆ ಒತ್ತುವರಿ ಸಮೀಕ್ಷೆಗೆ ಸಂಬಂಧಿಸಿ ಜಿಲ್ಲಾಧಿಕಾರಿ ರಚಿಸಿರುವ ಸಮಿತಿ ವರದಿ ಬಗ್ಗೆ ಪ್ರಶ್ನಿಸಿದರು. ನಗರ ಮಾಲೆಮಾರ್ ಬಳಿ ಒತ್ತುವರಿ ತೆರವಿಗೆ ಕೈಗೊಂಡ ಕ್ರಮ ಅರ್ಧದಲ್ಲಿ ನಿಲ್ಲಿಸಲಾಗಿದೆ ಎಂಬ ಆರೋಪವೂ ಸಭೆಯಲ್ಲಿ ಸದಸ್ಯರಿಂದ ವ್ಯಕ್ತವಾಯಿತು.

ಆಯುಕ್ತ ಮುಹಮ್ಮದ್ ನಝೀರ್ ಪ್ರತಿಕ್ರಿಯಿಸಿ, ಮಾಲೆಮಾರ್ ಪ್ರದೇಶದಲ್ಲಿ ತೆರವು ಕಾರ್ಯಾಚರಣೆ ನಿಲ್ಲಿಸಿಲ್ಲ. ಬದಲಾಗಿ ಪ್ರಥಮ ಹಂತ ಕಾರ್ಯಾಚರಣೆ ಮಾತ್ರವೇ ನಡೆದಿದೆ. ಉಳಿದಂತೆ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಕಾರ್ಯಾಚರಣೆೆ ಪರಿಶೀಲನೆ ನಡೆಯುತ್ತಿದೆ ಎಂದರು.
ಜಿಲ್ಲಾಧಿಕಾರಿ ನಿರ್ದೇಶನದಲ್ಲಿ ಮೂಡಾ ಆಯುಕ್ತರ ನೇತೃತ್ವದ ಸಮಿತಿಯು ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿ ಮಧ್ಯಂತರ ವರದಿಯನ್ನು ಜಿಲ್ಲಾಧಿಕಾರಿಗೆ ನೀಡಿದೆ. ಅದು ಮನಪಾಕ್ಕೆ ಬಂದಿಲ್ಲ. ಮನಪಾ ವ್ಯಾಪ್ತಿಯಲ್ಲಿ 12 ರಾಜಕಾಲುವೆಗಳು ಬರುತ್ತವೆ. ಸಮಿತಿಯು ಸಮೀಕ್ಷೆಗೆ ಮತ್ತಷ್ಟು ಕಾಲಾವಕಾಶ ಕೋರಿದೆ. ಹೀಗಾಗಿ ಜಿಲ್ಲಾಧಿಕಾರಿಯವರು ಸಮಿತಿ ವರದಿಯನ್ನು ಮನಪಾಕ್ಕೆ ಸಲ್ಲಿಸಿದಾಕ್ಷಣ ಅಗತ್ಯವಿರುವ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ಹೇಳಿದರು.

ಮಳೆ ನೀರು ವ್ಯವಸ್ಥಿತವಾಗಿ ಹರಿದು ಹೋಗಲು ತೋಡುಗಳ ವ್ಯವಸ್ಥೆಯಿಲ್ಲ. ಮೂಡಾ ದವರು ಮನೆ ಅಥವಾ ಕಟ್ಟಡ ಕಟ್ಟುವ ಸಂದರ್ಭ ಮಳೆ ನೀರು ಹರಿದು ಹೋಗಲು ಸುತ್ತಮುತ್ತ ಚರಂಡಿ ವ್ಯವಸ್ಥೆ ಇರುವುದನ್ನು ಖಾತರಿಪಡಿಸುತ್ತಿಲ್ಲ. ಇದರಿಂದಾಗಿ ಮಳೆ ನೀರು ಹೋಗಲು ಚರಂಡಿಗಳಿಲ್ಲದೆ ನೀರು ರಸ್ತೆಯಲ್ಲಿ ಅಥವಾ ಒಳಚರಂಡಿಗಳಿಗೆ ಬಿಡಲಾಗುತ್ತಿದೆ ಎಂದು ಮಧು ಕಿರಣ್ ಆಕ್ಷೇಪಿಸಿದರು.

ಆದರೆ ಈ ಸಂದರ್ಭ ಸಭೆಯಲ್ಲಿ ಮೂಡಾದಿಂದ ಅಧಿಕಾರಿಗಳು ಯಾರೂ ಹಾಜರಿಲ್ಲದ ಕಾರಣ, ಮೇಯರ್ ಭಾಸ್ಕರ ಮೊಯ್ಲಿಯವರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಂದ ನಗರ ಪಾಲಿಕೆ ಆಗುತ್ತಿರುವ ಸಮಸ್ಯೆ ಬಗ್ಗೆ ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ 15 ದಿನಗಳಲಿ್ಲ ಸಭೆ ನಡೆಸುವುದಾಗಿ ಹೇಳಿದರು.

ವಾರ್ಡ್ ಕಮಿಟಿ ರಚನೆಗೆ ಶಾಸಕ ವೇದವ್ಯಾಸ್ ಕಾಮತ್ ಸಲಹೆ
ಸಭೆಯಲ್ಲಿ ಭಾಗವಹಿಸಿದ್ದ ನೂತನ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಮಳೆ ಸಂದರ್ಭ ಉಂಟಾಗುವ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳುವ ಜತೆಗೆ ವಾರ್ಡ್ ಸಮಿತಿ ರಚನೆ ಆಗಬೇಕು ಎಂದು ಸಲಹೆ ನೀಡಿದರು.

ಶಾಸಕ ಭರತ್ ಶೆಟ್ಟಿ ಮಾತನಾಡಿ, ಮಳೆ ಹಾನಿ ಸಂದರ್ಭ ನೀಡಲಾಗುವ ಪರಿಹಾರ ಮೊತ್ತ ಅತ್ಯಲ್ಪವಾಗಿದ್ದು, ಅದನ್ನು ಮನಪಾ ವತಿಯಿಂದ ಹೆಚ್ಚಿಸುವ ನಿಟ್ಟಿನಲಿ್ಲ ಗಮನ ಹರಿಸಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News