​ದ.ಕ. ಜಿಲ್ಲೆಯ ಐದು ಮಸೀದಿಗಳಿಗೆ ವಕ್ಫ್ ಮಂಡಳಿಯಿಂದ ಚೆಕ್ ವಿತರಣೆ

Update: 2018-06-28 12:26 GMT

ಮಂಗಳೂರು, ಜೂ.28: ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟ ಕೆಲವು ಪ್ರಮುಖ ಮಸೀದಿಗಳನ್ನು ಆದರ್ಶ ಮಸೀದಿ (ಮಿಸಾಲಿ ಮಸೀದಿ)ಗಳನ್ನಾಗಿ ನಿರ್ವಹಿಸಲು ಹಾಗೂ ಮಾಹಿತಿ ಕೇಂದ್ರ ಸ್ಥಾಪಿಸಲು ಗುರುವಾರ ನಗರದ ಆಝಾದ್ ಭವನದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಐದು ಮಸೀದಿಗಳಿಗೆ ತಲಾ 80 ಸಾವಿರ ರೂ. ಚೆಕ್ ವಿತರಿಸಲಾಯಿತು.

ನಗರದ ಬಂದರ್‌ನ ಝೀನತ್ ಭಕ್ಸ್ ಜುಮಾ ಮಸ್ಜಿದ್, ಬೆಳ್ಳಾರೆಯ ಝಕರಿಯಾ ಜುಮಾ ಮಸ್ಜಿದ್, ಪುತ್ತೂರಿನ ಅನ್ಸಾರುದ್ದೀನ್ ಜಮಾಅತ್ ಕಮಿಟಿ, ಗುರುವಾಯನಕೆರೆ ಜುಮಾ ಮಸ್ಜಿದ್, ಉಳ್ಳಾಲದ ಕೇಂದ್ರ ಜುಮಾ ಮಸ್ಜಿದ್‌ಗಳಿಗೆ ವಕ್ಫ್ ಮಂಡಳಿಯಿಂದ ಸಹಾಯ ಧನ ವಿತರಿಸಲಾಯಿತು.

ದ.ಕ. ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಮಾತನಾಡಿ, ಇಲಾಖೆಯಿಂದ ಪ್ರತಿ ಮಸೀದಿಗೆ ಬಿಡುಗಡೆಯಾಗಿರುವ 80 ಸಾವಿರ ರೂ. ಸಹಾಯಧನದಿಂದ ಮಸೀದಿಗಳನ್ನು ನಿರ್ವಹಿಸಬೇಕು. ಜೊತೆಗೆ ಸರಕಾರದಿಂದ ಬಿಡುಗಡೆಯಾಗಿರುವ, ಬಿಡುಗಡೆಯಾಗುತ್ತಿರುವ ಯೋಜನೆಗಳ ಕುರಿತು ಸಮುದಾಯಕ್ಕೆ ಮಾಹಿತಿಯನ್ನು ನೀಡುವ ಸಲುವಾಗಿ ಮಾಹಿತಿ ಕೇಂದ್ರವನ್ನು ಸ್ಥಾಪಿಸಬೇಕು ಎಂದರು.

ಸಮುದಾಯದ ಬಡವರ ಮಕ್ಕಳಿಗೆ ಶಿಕ್ಷಣ ಒದಗಿಸಲು ಎಲ್ಲರೂ ಮುಂದಾಗಬೇಕು. ವಿದ್ಯಾರ್ಥಿಗಳಿಗಾಗಿಯೇ ಇರುವ ಸೌಲಭ್ಯಗಳನ್ನು, ಶಿಷ್ಯವೇತನದ ಕುರಿತು ಮಾಹಿತಿ ನೀಡಬೇಕು. ಸದ್ಯ ಅನುದಾನ ಪಡೆದ ಮಸೀದಿಗಳು ಅನಕ್ಷರಸ್ಥ ಕುಟುಂಬಗಳು ಇದ್ದಲ್ಲಿಗೆ ತೆರಳಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವರಿಕೆ ಮಾಡಿಕೊಡಬೇಕು ಎಂದು ಕಣಚೂರು ಮೋನು ಕರೆ ನೀಡಿದರು.

ಬಿಡುಗಡೆಯಾದ ಸಹಾಯಧನದ ಪೈಕಿ 30 ಸಾವಿರ ರೂ.ವನ್ನು ಗಣಕಯಂತ್ರ, ಪ್ರಿಂಟರ್ ಮತ್ತು ಯುಪಿಎಸ್ ಖರೀದಿಸಲು ಹಾಗೂ ಉಳಿದ 50 ಸಾವಿರ ರೂ.ವನ್ನು ಡೆಟಾ ಎಂಟ್ರಿ ಆಪರೇಟರ್‌ಗಳ ನೇಮಕಾತಿ ಇತ್ಯಾದಿಗಾಗಿ ಬಳಕೆ ಮಾಡಬೇಕಾಗಿದೆ ಎಂದು ದ.ಕ. ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕರ್ ತಿಳಿಸಿದರು.

ಈ ಸಂದರ್ಭ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಶಾಹುಲ್ ಹಮೀದ್ ಮೆಟ್ರೋ, ಸದಸ್ಯರಾದ ಶಂಸುದ್ದೀನ್, ನೂರುದ್ದೀನ್ ಸಾಲ್ಮರ, ಉಸ್ಮಾನ್ ಕರೋಪಾಡಿ, ಮುಹಮ್ಮದ್ ಅಲಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News