ಮೋದಿ ವಿದೇಶ ಪ್ರವಾಸಕ್ಕೆ ಬರೋಬ್ಬರಿ 355 ಕೋಟಿ ರೂ. ವೆಚ್ಚ

Update: 2018-06-28 16:52 GMT

ಹೊಸದಿಲ್ಲಿ, ಜೂ.28: ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ 50ಕ್ಕೂ ಅಧಿಕ ದೇಶಗಳಿಗೆ 41 ಬಾರಿ ಪ್ರವಾಸ ಕೈಗೊಂಡಿದ್ದು ಈ ಪ್ರವಾಸಗಳಿಗೆ ಒಟ್ಟಾರೆಯಾಗಿ 355 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ವರದಿಯು ತಿಳಿಸಿದೆ.

ಮಾಹಿತಿ ಹಕ್ಕುಗಳ ಕಾರ್ಯಕರ್ತ ಭೀಮಪ್ಪ ಗಡದ್, ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಈ ಮಾಹಿತಿ ನೀಡಲಾಗಿದ್ದು, ಭೀಮಪ್ಪ ಈ ಮಾಹಿತಿಯನ್ನು ಆಂಗ್ಲ ಪತ್ರಿಕೆ ಜೊತೆ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಒಟ್ಟಾರೆಯಾಗಿ ವಿದೇಶಗಳಲ್ಲಿ 165 ದಿನಗಳನ್ನು ಕಳೆದಿದ್ದಾರೆ. 2015ರ ಎಪ್ರಿಲ್ 9ರಿಂದ 15ರವರೆಗೆ ಫ್ರಾನ್ಸ್, ಜರ್ಮನಿ ಹಾಗೂ ಕೆನಡಾ ದೇಶಗಳಿಗೆ ಒಂಬತ್ತು ದಿನಗಳ ಪ್ರವಾಸಕ್ಕೆ ಅತೀ ಹೆಚ್ಚು, 31,25,78,000 ರೂ. ವೆಚ್ಚ ಮಾಡಲಾಗಿದೆ ಎಂದು ವರದಿ ತಿಳಿಸಿದೆ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ 2014ರ ಜೂನ್ 15-16ಕ್ಕೆ ಭೂತಾನ್‌ಗೆ ಕೈಗೊಂಡ ಪ್ರಪ್ರಥಮ ವಿದೇಶ ಪ್ರವಾಸಕ್ಕೆ ಅತೀ ಕಡಿಮೆ, 2,45,27,465 ರೂ. ವೆಚ್ಚ ಮಾಡಿದಲಾಗಿದೆ.

“ಕೆಲ ವರ್ಷಗಳ ಹಿಂದೆ ನಾನು ಕರ್ನಾಟಕ ಮುಖ್ಯಮಂತ್ರಿ ಕೈಗೊಂಡ ವಿದೇಶ ಪ್ರವಾಸಗಳಿಗೆ ಭರಿಸಲಾದ ವೆಚ್ಚದ ವಿವರ ಕೋರಿ ಅರ್ಜಿ ಹಾಕಿದ್ದೆ. ಇದೀಗ ಪ್ರಧಾನಿ ಮೋದಿಯ ವಿದೇಶ ಪ್ರವಾಸಕ್ಕೆ ತಗುಲಿರುವ ವೆಚ್ಚದ ಬಗ್ಗೆ ಮಾಹಿತಿ ಕೇಳಿದ್ದೇನೆ. ನನಗೆ ಸಿಕ್ಕ ಮಾಹಿತಿ ಆಘಾತ ನೀಡುವಂತಿದೆ” ಎಂದು ಭೀಮಪ್ಪ ಗಡದ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News