ಸತ್ಯ ಹೇಳುವುದಕ್ಕಾಗಿ ನಾನು ಸಾಯಬೇಕಿದ್ದರೂ ಚಿಂತೆಯಿಲ್ಲ ಎಂದ ಆರ್ ಟಿಐ ಕಾರ್ಯಕರ್ತ

Update: 2018-06-28 15:31 GMT

ಹೊಸದಿಲ್ಲಿ, ಜೂ.28: ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಿರ್ದೇಶಕರಾಗಿರುವ ಅಹ್ಮದಾಬಾದ್ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನವೆಂಬರ್ 8, 2016ರ ನೋಟ್ ಬ್ಯಾನ್ ನಂತರದ 5 ದಿನಗಳಲ್ಲಿ ದಾಖಲೆ ಪ್ರಮಾಣದ ನೋಟುಗಳನ್ನು ಪಡೆದಿದೆ ಎಂಬ  ಮಾಹಿತಿಯನ್ನು ಆರ್‍ಟಿಐ ಅರ್ಜಿಯೊಂದರ ಮುಖಾಂತರ ಪಡೆದವರು ಮುಂಬೈ ಮೂಲದ ಆರ್‍ಟಿಐ ಕಾರ್ಯಕರ್ತ ಮನೋರಂಜನ್ ಎಸ್. ರಾಯ್. ಈ ಆರ್‍ಟಿಐ ಮಾಹಿತಿ ಬಿಜೆಪಿಗೆ ಮುಜುಗರ ಸೃಷ್ಟಿಸಿದ್ದರೆ, ವಿಪಕ್ಷ ಕಾಂಗ್ರೆಸ್ ಕೈಗೆ ಒಂದು ಅಸ್ತ್ರವನ್ನು ಒದಗಿಸಿತ್ತು. ನೋಟು ಅಮಾನ್ಯೀಕರಣ ಒಂದು ಹಗರಣವಾಗಿತ್ತೆಂದು ಈ ಆರ್‍ಟಿಐ ಮಾಹಿತಿಯಿಂದ ತಿಳಿಯುತ್ತದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಆದರೆ ರಾಯ್ ಮಾತ್ರ ತಮ್ಮ ಆರ್‍ಟಿಐ ಮೂಲಕದ ಹೋರಾಟದ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ.

"ನನಗೆ ಯಾವುದೇ ರಾಜಕೀಯ ಅಜೆಂಡಾದಲ್ಲಿ ಆಸಕ್ತಿಯಿಲ್ಲ. ಎಲ್ಲಾ ಪಕ್ಷಗಳೂ ನನಗೆ ಸಮಾನ. ನನಗೆ  ನನ್ನ ದೇಶದ ಬಗ್ಗೆ ಮಾತ್ರ ಕಾಳಜಿಯಿದೆ. ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ'' ಎಂದು ಅವರು ಹೇಳುತ್ತಾರೆ.

ಆರ್‍ಟಿಐ ಮಾಹಿತಿಯಲ್ಲಿ  ದೇಶದ ಕೆಲ ಪ್ರಮುಖ ಹಾಗೂ ಪ್ರಭಾವಶಾಲಿ ವ್ಯಕ್ತಿಗಳ ಹೆಸರುಗಳಿರುವುದರಿಂದ ತಮ್ಮ ಸುರಕ್ಷತೆಯ ಬಗ್ಗೆ ಚಿಂತೆಯಿದೆ ಎಂದು ರಾಯ್ ಒಪ್ಪಿಕೊಳ್ಳುತ್ತಾರೆ. ಎರಡು ತಿಂಗಳುಗಳ ಹಿಂದೆ  ಕರ್ನಾಟಕ ಚುನಾವಣೆ ಸಂದರ್ಭ ಇವಿಎಂ ತಿರುಚುವಿಕೆ ಆರೋಪಗಳನ್ನು ಬಹಿರಂಗ ಪಡಿಸುವ ಕಾರ್ಯದಲ್ಲಿ ತಾನು ಶಾಮೀಲಾಗಿದ್ದಾಗಿ ಅವರು ಹೇಳುತ್ತಾರಲ್ಲದ ಸತ್ಯಕ್ಕಾಗಿ ತಮ್ಮ ಹೋರಾಟವನ್ನು ತಡೆಯುವುದು  ಯಾರಿಗೂ ಸಾಧ್ಯವಿಲ್ಲ. ಸತ್ಯ ಹೇಳಬೇಕಾದರೆ ನಾನು ಸಾಯಬೇಕಿದ್ದರೂ ಹಾಗೆಯೇ ಆಗಲಿ" ಎಂದು ಅವರು ದೃಢಚಿತ್ತತೆಯಿಂದ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News