ಸಮಾಜದ ಸ್ವಾಸ್ಥ್ಯಕ್ಕಾಗಿ ಎನ್‍ಕೌಂಟರ್ ಗಳು ಸರಕಾರಗಳ ಸಾಧನ ಎಂದ ಬಿಜೆಪಿ ನಾಯಕ!

Update: 2018-06-28 15:43 GMT

ಕೊಲ್ಕತ್ತಾ, ಜೂ.28: "ಎನ್‍ ಕೌಂಟರ್ ಗಳು ಆಡಳಿತದ ಅಗತ್ಯ ಸಾಧನವಾಗಿದ್ದು, ಎಲ್ಲಾ ಸರಕಾರಗಳು ಈ ಸಾಧನವನ್ನು ಸಮಾಜದ ರಕ್ಷಣೆಗಾಗಿ ಉಪಯೋಗಿಸಿವೆ. ಶಾಂತಿಗಾಗಿ ಅಗತ್ಯ ಬಿದ್ದಾಗಲೆಲ್ಲಾ ಎನ್‍ ಕೌಂಟರ್ ನಡೆಸುವುದು ಸರಕಾರದ ಜವಾಬ್ದಾರಿ" ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್  ತಾವು ತೃಣಮೂಲ ಕಾಂಗ್ರೆಸ್ ನಾಯಕರಿಗೆ ಇತ್ತೀಚೆಗೆ ನೀಡಿದ್ದ ಎನ್‍ ಕೌಂಟರ್ ಬೆದರಿಕೆಗಳ ಬಗ್ಗೆ ಸಮಜಾಯಿಷಿ ನೀಡಿದ್ದಾರೆ.

"ಎಲ್ಲಾ ಸರಕಾರಗಳೂ ತಮ್ಮ ರಾಜ್ಯಗಳಲ್ಲಿ ಇದನ್ನು ಮಾಡುತ್ತವೆ, ಉತ್ತರಪ್ರದೇಶದಿಂದ ಬಂಗಾಳದ ತನಕ, ಉತ್ತರ ಪ್ರದೇಶ ಈ ನಿಟ್ಟಿನಲ್ಲಿ ಚಾಂಪಿಯನ್'' ಎಂದು  ಹೇಳಿದ ಘೋಷ್, ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರ ರಾಜ್ಯದಲ್ಲಿ ಅಪರಾಧ ನಿಯಂತ್ರಿಸಲು ವಿವಾದಾತ್ಮಕ ಪೊಲೀಸ್ ಎನ್‍ ಕೌಂಟರ್ ಗಳ ಬಗ್ಗೆ ಧೈರ್ಯದಿಂದ ಹೇಳಿಕೊಂಡಿದೆ ಎಂದಿದ್ದಾರೆ.

ಜಲ್ಪೈಗುರಿ ಜಿಲ್ಲಾಡಳಿತದ ವಿರುದ್ಧ ಕಳೆದ ವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಘೋಷ್ ಬಂಗಾಳದಲ್ಲಿ ಗೂಂಡಾಗಿರಿಯಲ್ಲಿ ತೊಡಗುವ ನಾಯಕರನ್ನು ಜೈಲಿಗಟ್ಟಲಾಗುವುದು ಇಲ್ಲವೇ ಎನ್‍ ಕೌಂಟರ್ ನಡೆಯುವುದು ಎಂದು ಹೇಳಿದ್ದರು. ಅವರ ಈ ಹೇಳಿಕೆಗೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ತಾವು ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ``ಪರಿಸ್ಥಿತಿ ನಿಯಂತ್ರಣ ಮೀರಿದಾಗ ಎನ್‍ಕೌಂಟರ್ ನಡೆಸಿ ಸಮಾಜವನ್ನು ರಕ್ಷಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ತಮ್ಮ ಈ ಎನ್‍ ಕೌಂಟರ್ ಬಗೆಗಿನ ಅಭಿಪ್ರಾಯಕ್ಕೆ ಅವರ ಪಕ್ಷದ ನಾಯಕರುಗಳ ಒಪ್ಪಿಗೆಯಿದೆಯೇ  ಎಂಬ ಪ್ರಶ್ನೆಗೆ ತಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಘೋಷ್ ಹೇಳಿದ್ದಾರೆ.

``ಎನ್‍ ಕೌಂಟರ್ ಬಗ್ಗೆ ತಮ್ಮ ಹೇಳಿಕೆಯ ಅರ್ಥ ಬಿಜೆಪಿ  ಕಾರ್ಯಕರ್ತರು ಬೀದಿಗೆ ಶಸ್ತ್ರಗಳೊಂದಿಗೆ ಬೀದಿಗಿಳಿಯುತ್ತಾರೆ ಎಂದಲ್ಲ. ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಾರೆಂದು ಅರ್ಥ. ಉತ್ತರ ಪ್ರದೇಶದಲ್ಲಿ ಆದಿತ್ಯನಾಥ್ ಸರಕಾರ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರಕಾರ ಮಾಡುತ್ತಿರುವ ರೀತಿ ಎಂದು ಅರ್ಥ'' ಎಂದು ಘೋಷ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News