ಅಮೆರಿಕದಲ್ಲಿ ಬಂಧಿಯಾಗಿರುವ 52 ಭಾರತೀಯರ ಪರ ಮಾತನಾಡುವಂತೆ ನಿಕ್ಕಿ ಹ್ಯಾಲೆಗೆ ಗುರುದ್ವಾರ ಮನವಿ
ಹೊಸದಿಲ್ಲಿ, ಜೂ.28: ಗುರುವಾರದಂದು ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ನಿಕ್ಕಿ ಹ್ಯಾಲೆಯನ್ನು ಭೇಟಿಯಾದ ದಿಲ್ಲಿ ಸಿಖ್ ಗುರುದ್ವಾರ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಅಕ್ರಮ ವಲಸೆಯ ಭಾಗವಾಗಿ ಅಮೆರಿಕದ ಒರೆಗೋನ್‌ನಲ್ಲಿರುವ ಬಂಧನ ಕೇಂದ್ರದಲ್ಲಿರುವ, ಬಹುತೇಕ ಸಿಖ್ಖರೇ 52 ಭಾರತೀಯರ ಬಗ್ಗೆ ಧ್ವನಿಯೆತ್ತುವಂತೆ ಮನವಿ ಮಾಡಿದ್ದಾರೆ.
ಇಲ್ಲಿನ ಗುರುದ್ವಾರ ಸಿಸ ಗಂಜ್ ಸಾಹಿಬ್‌ಗೆ ನಿಕ್ಕಿ ಹ್ಯಾಲೆ, ಭಾರತದ ಅಮೆರಿಕನ್ ರಾಯಭಾರಿ ಕೆನ್ನೆತ್ ಜಸ್ಟರ್ ಅವರ ಜೊತೆ ಭೇಟಿ ನೀಡಿದ ವೇಳೆ ಬಿಜೆಪಿ ಶಾಸಕ ಹಾಗೂ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಂಜಿಂದರ್ ಸಿಂಗ್ ಸಿರ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿದ್ದಾರೆ. ನಿಕ್ಕಿ ಹ್ಯಾಲೆ ವಿಶ್ವಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿ ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ. ಅಮೆರಿಕದಲ್ಲಿ ಆಶ್ರಯ ಬಯಸುವ ಬೃಹತ್ ಅಕ್ರಮ ವಲಸಿಗರ ಗುಂಪಿನಲ್ಲಿ 52 ಭಾರತೀಯರೂ ಸೇರಿದ್ದಾರೆ. ಬಹುತೇಕ ಸಿಖ್ಖರನ್ನೇ ಹೊಂದಿರುವ ಭಾರತೀಯ ತಂಡ ಸದ್ಯ ಅಮೆರಿಕದ ಒರೆಗೊನ್‌ನಲ್ಲಿ ಬಂಧನ ಕೇಂದ್ರದಲ್ಲಿದ್ದಾರೆ.