ನಿಮ್ಮ ಭವಿಷ್ಯನಿಧಿಯ ಯೂನಿವರ್ಸಲ್ ಅಕೌಂಟ್ ನಂಬರ್‌ನ್ನು ಕಂಡುಕೊಳ್ಳುವುದು ಹೇಗೆ?

Update: 2018-06-29 13:43 GMT

ನೀವು ಯಾವುದೇ ಸಂಸ್ಥೆಯ ಉದ್ಯೋಗಿಯಾಗಿದ್ದಲ್ಲಿ ಮತ್ತು ನೌಕರರ ಭವಿಷ್ಯನಿಧಿ(ಇಪಿಎಫ್)ಗೆ ವಂತಿಗೆಯನ್ನು ಸಲ್ಲಿಸುತ್ತಿದ್ದಲ್ಲಿ ನಿಮ್ಮ ಯೂನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಅಥವಾ ಸಾರ್ವತ್ರಿಕ ಖಾತೆ ಸಂಖ್ಯೆ ನಿಮಗೆ ಗೊತ್ತಿರುವುದು ಅಗತ್ಯವಾಗಿದೆ. ನೀವು ಉದ್ಯೋಗವನ್ನು ಬದಲಿಸಿದರೂ ವಿಶಿಷ್ಟ ಸಂಖ್ಯೆಯಾಗಿರುವ ಯುಎಎನ್ ಬದಲಾಗುವುದಿಲ್ಲ.

 ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯು ತನ್ನ ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗಿಸಿದೆ. ಇಪಿಎಫ್‌ಒದ ಎಲ್ಲ ಆನ್‌ಲೈನ್ ಪ್ರಕ್ರಿಯೆಗಳಲ್ಲಿ ಸಕ್ರಿಯ ಯುಎಎನ್ ಹೊಂದಿರುವುದು ತುಂಬ ಮುಖ್ಯವಾಗಿದೆ.

 ವ್ಯಕ್ತಿಯ ಉದ್ಯೋಗದಾತರ ಸಂಖ್ಯೆ ಎಷ್ಟೇ ಆಗಿದ್ದರೂ ಯುಎನ್‌ಎ ಓರ್ವ ಚಂದಾದಾರ ಒಂದೇ ಖಾತೆ ಸಂಖ್ಯೆಯನ್ನು ಹೊಂದಿರುವಂತೆ ಮಾಡುತ್ತದೆ. ಆದ್ದರಿಂದ ನೀವು ಒಂದು ಬಾರಿ ಯುಎಎನ್ ಪಡೆದುಕೊಂಡರೆ ನೀವು ಉದ್ಯೋಗ ಬದಲಿಸಿ ಇಪಿಎಫ್ ಯೋಜನೆಯ ವ್ಯಾಪ್ತಿಯಲ್ಲಿರುವ ಬೇರೆ ಸಂಸ್ಥೆಗೆ ಸೇರಿಕೊಂಡರೂ ಅದು ಬದಲಾಗುವುದಿಲ್ಲ. ನಿಮ್ಮ ಹಿಂದಿನ ಬ್ಯಾಲನ್ಸ್ ನಿಮ್ಮ ಹೊಸ ಖಾತೆಗೆ ವರ್ಗಾವಣೆಗೊಳ್ಳು ನೀವು ನಿಮ್ಮ ಯುಎಎನ್ ಅನ್ನು ಹೊಸ ಉದ್ಯೋಗದಾತ ಸಂಸ್ಥೆಗೆ ಸಲ್ಲಿಸಿದರೆ ಸಾಕು. ನಿಮ್ಮ ಯುಎಎನ್ ಬದಲಾಗದಿದ್ದರೂ ನಿಮಗೆ ಹೊಸ ಐಡಿಯನ್ನು ಮತ್ತು ಉದ್ಯೋಗದಾತ ಸಂಸ್ಥೆಯ ಉದ್ಯೋಗಿಗಳಿಗೆ ನಿರ್ದಿಷ್ಟವಾಗಿರುವ ಭವಿಷ್ಯನಿಧಿ ಖಾತೆಯನ್ನು ಇಪಿಎಫ್‌ಒ ನಿಮಗೆ ಒದಗಿಸುತ್ತದೆ.

ನೀವು ಸುದೀರ್ಘ ಕಾಲದಿಂದ ಭವಿಷ್ಯನಿಧಿಗೆ ವಂತಿಗೆ ಸಲ್ಲಿಸುತ್ತಿದ್ದು, ನಿಮಗೆ ನಿಮ್ಮ ಯುಎಎನ್ ಗೊತ್ತಿಲ್ಲದಿದ್ದರೆ ಅದರ ವಿವರಗಳಿಗಾಗಿ ನೀವು ನಿಮ್ಮ ಉದ್ಯೋಗದಾತರನ್ನು ಕೇಳಬಹುದು ಅಥವಾ ಇಪಿಎಫ್‌ಒದ ಯುಎಎನ್ ಪೋರ್ಟ್‌ಲ್‌ನ ಮೂಲಕ ನೀವೇ ಖುದ್ದಾಗಿ ತಿಳಿದುಕೊಳ್ಳಬಹುದು.

ಅದಕ್ಕಾಗಿ ಯುಎಎನ್ ಸಂಬಂಧಿತ ಸೇವೆಗಳಿಗಾಗಿರುವ ಇಪಿಎಫ್‌ಒದ ಏಕೀಕೃತ ಮೆಂಬರ್ ಪೋರ್ಟ್‌ಲ್‌ಗೆ ಭೇಟಿ ನೀಡಿ,‘ಇಂಪಾರ್ಟಂಟ್ ಲಿಂಕ್ಸ್’ನಡಿ ‘ನೋ ಯುವರ್ ಯುಎಎನ್ ಸ್ಟೇಟಸ್’ನ್ನು ಆಯ್ಕೆ ಮಾಡಿ. ಈಗ ಬ್ರೌಸರ್ ನಿಮ್ಮನ್ನು ಇನ್ನೊಂದು ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ನೀವು ನಿಮ್ಮ ಹಾಲಿ ಮೆಂಬರ್ ಐಡಿ ಅಥವಾ ಇಪಿಎಫ್ ಖಾತೆ ಸಂಖ್ಯೆ,ನಿಮ್ಮ ಹೆಸರು,ಜನ್ಮದಿನಾಂಕ,ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್‌ಗಳಂತಹ ವಿವರಗಳನ್ನು ತುಂಬಬೇಕಾಗುತ್ತದೆ. ನಿಮ್ಮ ಇಪಿಎಫ್ ಮೆಂಬರ್ ಐಡಿಯು ನಿಮ್ಮ ವೇತನದ ಚೀಟಿಯಲ್ಲಿ ಮುದ್ರಿತವಾಗಿರುತ್ತದೆ.

ಈ ವಿವರಗಳನ್ನು ಸಲ್ಲಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್‌ಗೆ ಅಧಿಕೃತ ಪಿನ್ ಸಂಖ್ಯೆ ಬರುತ್ತದೆ. ಇದನ್ನು ದಾಖಲಿಸಿದರೆ ನಿಮ್ಮ ಯುಎಎನ್ ನಿಮ್ಮ ಮೊಬೈಲ್‌ಗೆ ಮತ್ತು ಇ-ಮೇಲ್ ಐಡಿಗೆ ರವಾನೆಯಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News