ಅತ್ಯಾಚಾರಿಗಳು ಬದುಕಲು ಅರ್ಹರಲ್ಲ: ಶಿವರಾಜ್ ಸಿಂಗ್ ಚೌಹಾಣ್

Update: 2018-06-29 13:49 GMT

 ಭೋಪಾಲ,ಜೂ.29: ಅತ್ಯಾಚಾರಿಗಳು ಈ ಭೂಮಿಗೆ ಹೊರೆಯಾಗಿದ್ದಾರೆ, ಅವರು ಬದುಕಲು ಅರ್ಹರಲ್ಲ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಅವರು ಶುಕ್ರವಾರ ಇಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಂದಸೌರ್‌ನಲ್ಲಿ ಯುವಕನೋರ್ವ ಎಂಟರ ಹರೆಯದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಘಟನೆಯನ್ನೂ ಅವರು ಖಂಡಿಸಿದರು.

ಅತ್ಯಾಚಾರ ಪ್ರಕರಣಗಳ ವಿಚಾರಣೆ ತ್ವರಿತ ನ್ಯಾಯಾಲಯಗಳಲ್ಲಿ ನಡೆಯುವಂತೆ ನಾವು ಮಾಡಿದ್ದೇವೆ. ಇಂತಹ ಅಪರಾಧ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶೀಘ್ರ ಮರಣ ದಂಡನೆ ವಿಧಿಸುವಂತಾಗಲು ಇಂತಹುದೇ ಕ್ರಮವನ್ನು ಕೈಗೊಳ್ಳುವಂತೆ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳನ್ನು ನಾವು ಕೋರುತ್ತೇವೆ ಎಂದು ಅವರು ಹೇಳಿದರು.

12 ವರ್ಷ ಮತ್ತು ಅದಕ್ಕಿಂತ ಕಡಿಮೆ ಪ್ರಾಯದ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಮರಣ ದಂಡನೆಯನ್ನು ವಿಧಿಸುವ ನಿರ್ಣಯವೊಂದನ್ನು ಮಧ್ಯಪ್ರದೇಶ ವಿಧಾನಸಭೆಯು ಕಳೆದ ವರ್ಷ ಸರ್ವಾನುಮತದಿಂದ ಅಂಗೀಕರಿಸಿದೆ.

ಮಂದಸೌರ್ ಘಟನೆ ಕುರಿತಂತೆ ಚೌಹಾಣ್ ಅವರು, “ಅದೊಂದು ನೋವಿನ ಘಟನೆ. ನಾವು ಸಂತ್ರಸ್ತ ಬಾಲಕಿಯ ಕುಟುಂಬದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಆಕೆಯ ದೇಹಸ್ಥಿತಿಯ ಮೆಲೆ ನಿಗಾ ಇರಿಸಿದ್ದೇವೆ. ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ನಾನು ವೈದ್ಯರೊಂದಿಗೆ ನಿರಂತರ ಸಂಪರ್ಕವನ್ನಿಟ್ಟುಕೊಂಡಿದ್ದೇನೆ” ಎಂದರು.

ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ ಮತ್ತು ಆತನ ವಿರುದ್ಧ ಸಾಕ್ಷ್ಯಾಧಾರಗಳಿವೆ. ತ್ವರಿತ ನ್ಯಾಯಾಲಯಗಳ ಮೂಲಕ ಆತನಿಗೆ ಶೀಘ್ರವೇ ಮರಣ ದಂಡನೆಯಾಗುವಂತೆ ನೋಡಿಕೊಳ್ಳುತ್ತೇವೆ ಎಂದೂ ಚೌಹಾಣ್ ತಿಳಿಸಿದರು.

ಮಂದಸೌರ್‌ನಲ್ಲಿ ಮಂಗಳವಾರ ಸಂಜೆ ಬಾಲಕಿ ಮನೆಗೆ ಮರಳಲು ಶಾಲೆಯ ಹೊರಗೆ ಮನೆಯವರಿಗಾಗಿ ಕಾಯುತ್ತಿದ್ದಾಗ ಆರೋಪಿ ಇರ್ಫಾನ್ ಅಲಿಯಾಸ್ ಭೈಯ್ಯು(20) ಆಕೆಯನ್ನು ಅಪಹರಿಸಿ ಬಸ್ ನಿಲ್ದಾಣ ಪ್ರದೇಶದ ಲಕ್ಮಣ ದರ್ವಾಜಾ ಬಳಿಯ ಪೊದೆಯಲ್ಲಿ ಅತ್ಯಾಚಾರವೆಸಗಿ,ಬಳಿಕ ಚೂರಿಯಿಂದ ಕತ್ತನ್ನು ಸೀಳಿ ಸಾಯಲು ಬಿಟ್ಟು ಪರಾರಿಯಾಗಿದ್ದ. ಚಿಂತಾಜನಕ ಸ್ಥಿತಿಯಲ್ಲಿದ್ದ ಬಾಲಕಿಯನ್ನು ಬಳಿಕ ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದರು. ಆರೋಪಿಯನ್ನು ಬುಧವಾರ ರಾತ್ರಿ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News