ಭತ್ಯೆಯಲ್ಲಿ ಸೈನಿಕರು ಪಡೆಯಬಹುದಾದ ಬಟ್ಟೆಗಳ ಪಟ್ಟಿ ಸಿದ್ಧಪಡಿಸಿದ ಸರಕಾರ
ಹೊಸದಿಲ್ಲಿ, ಜೂ.29: ಹಲವು ತಿಂಗಳ ಸಮಾಲೋಚನೆಗಳ ಬಳಿಕ ರಕ್ಷಣಾ ಸಚಿವಾಲಯವು ಯೋಧರಿಗೆ ಸಿಗುವ ವಾರ್ಷಿಕ 10,000 ರೂ.ನಲ್ಲಿ ಅವರು ಖರೀದಿಸಬೇಕಾದ ವಸ್ತುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಸೈನಿಕರಿಗೆ ಬಟ್ಟೆ ಭತ್ಯೆಯನ್ನು ನೀಡಲು ಏಳನೇ ವೇತನ ಆಯೋಗ ಶಿಫಾರಸು ಮಾಡಿತ್ತು. ಇದಕ್ಕೂ ಮೊದಲು ಸೈನಿಕರಿಗೆ ಬಟ್ಟೆಗಳನ್ನು ರಕ್ಷಣಾ ಪಡೆಯ ಅಧೀನದಲ್ಲಿರುವ ಕಾರ್ಖಾನೆಗಳಿಂದ ಪೂರೈಕೆ ಮಾಡಲಾಗುತ್ತಿತ್ತು. ಯೋಧರು ಮತ್ತು ಕಿರಿಯ ದರ್ಜೆ ಅಧಿಕಾರಿಗಳು ಬೇಸಿಗೆಯ ಸಮವಸ್ತ್ರ, ಉಣ್ಣೆಯ ಟಿ-ಶರ್ಟ್, ಮಫ್ತಿ ಬಟ್ಟೆ ಸೇರಿದಂತೆ ಬೆಲ್ಟ್‌ಗಳು, ಬ್ಯಾಜ್, ರಿಬ್ಬನ್ ಹಾಗೂ ಇತರ ಪರಿಕರಗಳನ್ನು ಖರೀದಿಸಬಹುದು ಎಂದು ಸೇನೆ ಮತ್ತು ರಕ್ಷಣಾ ಸಚಿವಾಲಯ ತಿಳಿಸಿದೆ. ಗುರುವಾರದಂದು ರಕ್ಷಣಾ ಸಚಿವೆ ಈ ಪಟ್ಟಿಯನ್ನು ಅಂತಿಮಗೊಳಿಸಿದ್ದು ತಮಗೆ ಸಿಗುವ ಭತ್ಯೆಯಿಂದ ಸೈನಿಕರು ಇವುಗಳನ್ನು ಖರೀದಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಇನ್ನು, ಯುದ್ಧ ವಸ್ತ್ರಗಳು, ದೈಹಿಕ ಅಭ್ಯಾಸ ತರಬೇತಿ ಕಿಟ್ ಮತ್ತು ಹೊಸದಾಗಿ ಪರಿಚಯಿಸಲಾಗಿರುವ ಪಿಟಿ ಶೂಗಳು, ರೈನ್‌ಕೋಟ್‌ಗಳು, ಸೊಳ್ಳೆ ಪರದೆ ಹಾಗೂ ಇತರ ಎಲ್ಲ ಬಟ್ಟೆಗಳನ್ನು ಸೇನೆಯ ತನ್ನ ಕಾರ್ಖಾನೆಗಳಿಂದಲೇ ಒದಗಿಸಲಿದೆ ಎಂದು ಸಚಿವಾಲಯ ತಿಳಿಸಿದೆ. ಸಿಯಾಚಿನ್ ಹಾಗೂ ಇತರ ಎತ್ತರದ ಮತ್ತು ಅತಿಯಾದ ಶೀತ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಸೈನಿಕರಿಗೆ ಅಗತ್ಯವಿರುವ ಬಟ್ಟೆಗಳನ್ನು ಈಗಿನ ಮಾದರಿಯಲ್ಲೇ ಪೂರೈಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.