ನಾನು ಮುಸ್ಲಿಂ, ನಾನು ನನ್ನ ಮನೆಯನ್ನು ಮಾರುತ್ತಿದ್ದೇನೆ: ಮೀರತ್‌ನಲ್ಲಿ ಹೀಗೊಂದು ಪ್ರತಿಭಟನೆ

Update: 2018-06-29 15:29 GMT

ಮೀರತ್ (ಉ.ಪ್ರ), ಜೂ.29: “ನಾನು ಮುಸ್ಲಿಂ, ನಾನು ನನ್ನ ಮನೆಯನ್ನು ಮಾರುತ್ತಿದ್ದೇನೆ. ಇಲ್ಲಿ ಸಣ್ಣಪುಟ್ಟ ವಿವಾದಗಳಿಗೂ ಕೋಮು ಬಣ್ಣ ಬಳಿಯಲಾಗುತ್ತದೆ” ಎಂಬ ಪೋಸ್ಟರ್‌ಗಳು ಮೀರತ್‌ನ ಲಿಸರಿ ಗ್ರಾಮದಲ್ಲಿರುವ ಹತ್ತು ಮುಸ್ಲಿಂ ಮನೆಗಳ ಮುಂದೆ ಅಂಟಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಲ್ಲಿ ಸಣ್ಣಪುಟ್ಟ ಜಗಳಗಳಿಗೂ ಕೋಮು ಬಣ್ಣ ಬಳಿಯಲಾಗುತ್ತದೆ ಮತ್ತು ಪೊಲೀಸರೂ ಪಕ್ಷಪಾತ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಈ ಮುಸ್ಲಿಂ ಕುಟುಂಬಗಳು ಆರೋಪಿಸಿವೆ. ಈ ಕುಟುಂಬದ ಸದಸ್ಯರ ಆರೋಪದ ಪ್ರಕಾರ, ಜೂನ್ 21ರಂದು ಸ್ಥಳೀಯ ಅಂಗಡಿ ಮಾಲಕ ಜಾನಿ ಹಾಗೂ ಇತರರ ಮಧ್ಯೆ ಜಗಳ ನಡೆದಿತ್ತು. ಜಾನಿ ಪೊಲೀಸ್ ಠಾಣೆಯಲ್ಲಿ ಆರು ಮುಸ್ಲಿಂ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬುಧವಾರ ಇಬ್ಬರನ್ನು ಬಂಧಿಸಿದ್ದರು. ಆದರೆ ನಂತರ ಮುಸ್ಲಿಂ ಕುಟುಂಬಗಳು ದೂರು ನೀಡಲು ಠಾಣೆಗೆ ತೆರಳಿದಾಗ ಪೊಲೀಸರು ಅವರ ದೂರನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಮುಸ್ಲಿಂ ಕುಟುಂಬಗಳ ಆರೋಪವನ್ನು ತಳ್ಳಿ ಹಾಕಿರುವ ಪೊಲೀಸರು, ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಿಸಿದ್ದಲ್ಲಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ತೆರಳಬಹುದಿತ್ತು. ಅದು ಬಿಟ್ಟು ಈ ರೀತಿ ಪೋಸ್ಟರ್‌ಗಳನ್ನು ಅಂಟಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಆಕ್ಷೇಪವೆತ್ತಿರುವ ಸಮಾಜವಾದಿ ಪಕ್ಷದ ಮೀರತ್‌ನ ಶಾಸಕ ರಫೀಕ್ ಅನ್ಸಾರಿ, ಪೊಲೀಸರು ರಾಜಕೀಯ ಒತ್ತಡದಿಂದ ಒಂದು ಸಮುದಾಯದ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ಅವರು ಮುಸ್ಲಿಮರು ನೀಡಿದ ದೂರನ್ನು ಸ್ವೀಕರಿಸಲೂ ನಿರಾಕರಿಸಿದ್ದಾರೆ. ಅವರು ಕನಿಷ್ಟ ದೂರನ್ನು ದಾಖಲಿಸಬೇಕಿತ್ತು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News