×
Ad

ಯುಜಿಸಿಯ ಬದಲು ಉನ್ನತ ಶಿಕ್ಷಣ ಆಯೋಗ ರಚನೆಗೆ ಪಿಣರಾಯಿ ವಿಜಯನ್ ವಿರೋಧ

Update: 2018-06-29 21:16 IST

ತಿರುವನಂತಪುರ,ಜೂ.29: 1951ರ ಯುಜಿಸಿ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ ಬದಲು ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು ರಚಿಸುವ ಕೇಂದ್ರದ ನಿರ್ಧಾರವನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ವಿರೋಧಿಸಿದ್ದಾರೆ.

ಈ ಕ್ರಮವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ರಾಜ್ಯಗಳ ಪಾತ್ರವನ್ನು ನಿರ್ಬಂಧಿಸುವ ಕೇಂದ್ರದ ಉದ್ದೇಶವಾಗಿದೆ ಎಂದು ಅವರು ಶುಕ್ರವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಯುಜಿಸಿಯನ್ನು ರದ್ದುಗೊಳಿಸುವ ಮತ್ತು ಅದರ ಬದಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಅಧೀನದಲ್ಲಿ ಉನ್ನತ ಶಿಕ್ಷಣ ಆಯೋಗವನ್ನು ರಚಿಸುವ ಕೇಂದ್ರದ ಏಕಪಕ್ಷೀಯ ನಿರ್ಧಾರವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೂರಗಾಮಿ ದುಷ್ಪರಿಣಾಮಗಳನ್ನು ಬೀರುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ಯುಪಿಎ ಸರಕಾರದ ಮೊದಲ ಅಧಿಕಾರಾವಧಿಯಲ್ಲಿ ಶಿಕ್ಷಣ ಕ್ಷೇತ್ರದ ವಾಣಿಜ್ಯೀಕರಣದ ಗುರಿಯೊಂದಿಗೆ ಯುಜಿಸಿಯ ಬದಲು ಶೈಕ್ಷಣಿಕ ಆಯೋಗವೊಂದನ್ನು ರಚಿಸಲು ಇಂತಹುದೇ ಪ್ರಯತ್ನ ನಡೆದಿತ್ತು. ಆದರೆ ಎಡಪಕ್ಷಗಳ ವಿರೋಧದಿಂದಾಗಿ ಸರಕಾರವು ಅದನ್ನು ಕೈಬಿಟ್ಟಿತ್ತು ಎಂದಿರುವ ಅವರು,ಆಗಿನ ಯುಪಿಎ ಸರಕಾರಕ್ಕೆ ಜಾರಿಗೊಳಿಸಲು ಸಾಧ್ಯವಾಗದ್ದನ್ನು ಈಗ ಸಾಕಾರಗೊಳಿಸಲು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ಪ್ರಯತ್ನಿಸುತ್ತಿದೆ ಎಂದಿದ್ದಾರೆ.

ವಾಣಿಜ್ಯೀಕರಣದ ಜೊತೆಗೆ ಶಿಕ್ಷಣಕ್ಷೇತ್ರದ ಕೇಸರೀಕರಣವು ಈ ನಿರ್ಧಾರದ ಹಿಂದಿನ ಇನ್ನೊಂದು ಉದ್ದೇಶವಾಗಿದೆ ಎಂದಿರುವ ಅವರು,ಯುಜಿಸಿಯನ್ನು ರದ್ದುಗೊಳಿಸುವ ಬಿಜೆಪಿಯ ಉದ್ದೇಶಿತ ಕ್ರಮವನ್ನು ವಿರೋಧಿಸುವವರು ತಮ್ಮ ಧ್ವನಿಯನ್ನೆತ್ತುವ ಅಗತ್ಯವಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News