ಮುಂಬೈ ವಿಮಾನ ಅಪಘಾತ: 40 ಮಂದಿಯ ಪ್ರಾಣ ಉಳಿಸಿದ ಊಟ!
ಮುಂಬೈ, ಜೂ.29: ಮುಂಬೈಯಲ್ಲಿ ನಡೆದ ವಿಮಾನ ಪತನದ ವೇಳೆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದ ನಲ್ವತ್ತು ಕಾರ್ಮಿಕರ ಪ್ರಾಣವು ಊಟದ ಬಿಡುವಿನಿಂದಾಗಿ ಉಳಿದಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಗುರುವಾರ ಘಾಟ್ಕೋಪರ್ ಪ್ರದೇಶದ ನಿರ್ಮಾಣ ಹಂತದಲ್ಲಿದ್ದ ಕಟ್ಟಡಕ್ಕೆ ಬಡಿದ ನತದೃಷ್ಟ ವಿಮಾನವು ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿ ಬದಲಾಗಿತ್ತು. ಈ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಇರುತ್ತಿದ್ದರೆ ಸಾವಿನ ಸಂಖ್ಯೆ ಹಲವು ಪಟ್ಟು ಹೆಚ್ಚಾಗುವ ಸಾಧ್ಯತೆಯಿತ್ತು. ಆದರೆ ಘಟನೆ ನಡೆಯುವ ಕೆಲವೇ ನಿಮಿಷಗಳ ಮೊದಲು ಕಾರ್ಮಿಕರು ಊಟಕ್ಕೆ ತೆರಳಿದ್ದ ಕಾರಣ ಹೆಚ್ಚಿನ ಸಾವುನೋವು ಸಂಭವಿಸಿಲ್ಲ ಎಂದು ವರದಿ ತಿಳಿಸಿದೆ. ಘಟನೆಯಲ್ಲಿ ಅಲ್ಪಸ್ವಲ್ಪ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಮಾನ್ಯವಾಗಿ ಘಟನೆ ನಡೆದ ಸ್ಥಳದಲ್ಲೇ ನಾವು ಯಾವಾಗಲೂ ಊಟ ಮಾಡುತ್ತೇವೆ. ಆದರೆ ಗುರುವಾರ ಮಳೆ ಬರುತ್ತಿದ್ದ ಕಾರಣ ನಾವು ಸಮೀಪದ ನಿರ್ಮಾಣ ಹಂತದಲ್ಲಿರುವ ಇನ್ನೊಂದು ಕಟ್ಟದಲ್ಲಿ ಕುಳಿತಿದ್ದೆವು ಎಂದು ಓರ್ವ ಕಾರ್ಮಿಕ ತಿಳಿಸಿದ್ದಾರೆ.