ಮೋದಿಯವರೇ ಡಾಲರ್ ಎದುರು ರೂಪಾಯಿ ಮೌಲ್ಯ ನಿಮ್ಮ ವಯಸ್ಸನ್ನೂ ಮೀರಿದೆ: ಕಾಂಗ್ರೆಸ್ ವ್ಯಂಗ್ಯ
ಹೊಸದಿಲ್ಲಿ, ಜೂ.29: ಕಚ್ಚಾ ತೈಲದ ಬೆಲೆ ಅಧಿಕವಾಗಿರುವುದು ಮತ್ತು ವಿಸ್ತೃತ ಆರ್ಥಿಕ ಮೂಲಭೂತ ಅಂಶಗಳು ದುರ್ಬಲವಾಗಿರುವ ಕಾರಣ ಡಾಲರ್‍ನ ಎದುರು ಭಾರತೀಯ ರೂಪಾಯಿ ಮೌಲ್ಯ ಗುರುವಾರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ತಲುಪಿದ್ದು, ಒಂದು ಡಾಲರ್‍ಗೆ 69 ರೂ. ಆಗಿತ್ತು.
ಮಧ್ಯಾಹ್ನ 2.44ರ ವೇಳೆಗೆ ಅತ್ಯಂತ ಕನಿಷ್ಠ ಅಂದರೆ 68.92 ರೂಪಾಯಿಗೆ ಕುಸಿದ್ದು, ಹಿಂದಿನ ದಿನದ ವಹಿವಾಟು ಕೊನೆಯ ಮಟ್ಟ 68.61 ರೂಪಾಯಿ ಆಗಿತ್ತು. ರೂಪಾಯಿಯ ಇದುವರೆಗಿನ ಅತ್ಯಂತ ಕನಿಷ್ಠ ಮೌಲ್ಯ ಡಾಲರ್‍ಗೆ 68.87 ರೂಪಾಯಿ ಆಗಿತ್ತು. ಇದು 2016ರ ನವೆಂಬರ್ 24ರಂದು ದಾಖಲಾಗಿತ್ತು.
ಇತ್ತೀಚಿನ ದಿನಗಳಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳದಿಂದಾಗಿ ಡಾಲರ್ ಬೇಡಿಕೆ ದೃಢವಾಗಿದೆ ಎಂದು ವಿಶ್ಲೇಷಕರ ಹೇಳಿಕೆಗಳನ್ನು ಉಲ್ಲೇಖಿಸಿ ಐಎಎನ್‍ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರಸ್ತುತ ಹಣಕಾಸು ವರ್ಷ (2018-19ರಲ್ಲಿ) ಚಾಲ್ತಿ ಖಾತೆಯ ಕೊರತೆ ಹೆಚ್ಚುವ ನಿರೀಕ್ಷೆ ಕೂಡಾ ರೂಪಾಯಿಯನ್ನು ಮತ್ತಷ್ಟು ದುರ್ಬಲಗೊಳಿಸಿದೆ ಎಂದು ಹೇಳಿದೆ.
"ಭಾರತೀಯ ರೂಪಾಯಿ ಮೌಲ್ಯ ಇಂದು ಜೀವಿತಾವಧಿಯ ಕನಿಷ್ಠ ಮಟ್ಟಕ್ಕೆ ಕುಸಿದಿದ್ದು, ಹೆಚ್ಚುತ್ತಿರುವ ಕಚ್ಚಾತೈಲದ ಬೆಲೆ, ಡಾಲರ್ ಮೌಲ್ಯ ಏರಿಕೆಗೆ ಕಾರಣವಾಗಿದೆ. ವಿಸ್ತೃತವಾದ ಚಾಲ್ತಿ ಖಾತೆಯ ಕೊರತೆ ಮತ್ತು ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ನಿರಂತರವಾಗಿ ಬಂಡವಾಳದ ಹೊರಹರಿವು ಭಾರತೀಯ ಕರೆನ್ಸಿಯನ್ನು ಕೆಳಮಟ್ಟಕ್ಕೆ ತಳ್ಳಿದೆ" ಎಂದು ಈಕ್ವಿಟಿ 99ನ ಹಿರಿಯ ಸಂಶೋಧನಾ ವಿಶ್ಲೇಷಕ ರಾಹುಲ್ ಶರ್ಮಾ ಹೇಳಿದ್ದಾಗಿ ಐಎಎನ್‍ಎಸ್ ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿಯವರಿಗೆ ಮುಜುಗರ ತರುವ ಈ ಅವಕಾಶವನ್ನು ಕ್ಷಿಪ್ರವಾಗಿ ಬಳಸಿಕೊಂಡಿದ್ದು, ಹಿಂದೆ ಪ್ರತಿ ಬಾರಿ ರೂಪಾಯಿ ಮೌಲ್ಯ ಕುಸಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ವಿರುದ್ಧ ಮೋದಿ ಮಾಡುತ್ತಿದ್ದ ವಾಗ್ದಾಳಿಯನ್ನು ನೆನಪಿಸಿದೆ. ಪಕ್ಷದ ಮುಖ್ಯ ವಕ್ತಾರ ರಣ್ ದೀಪ್ ಸುರ್ಜೆವಾಲಾ ವಾಗ್ದಾಳಿಯ ಮುಂಚೂಣಿಯಲ್ಲಿದ್ದು, "ರೂಪಾಯಿ ಮೌಲ್ಯಕುಸಿತವನ್ನು ಹಿಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ವಯಸ್ಸಿಗೆ ಹೋಲಿಸಿ ನೀವು ಅಣಕಿಸಿದ್ದೀರಿ. ಆದರೆ ವಾಸ್ತವವಾಗಿ ಅದು ಎಂದೂ ಅಷ್ಟು ಕನಿಷ್ಠಮಟ್ಟಕ್ಕೆ ಕುಸಿದಿರಲಿಲ್ಲ. ಇದೀಗ ಡಾಲರ್ ಎದುರು ರೂಪಾಯಿ ಮೌಲ್ಯ ಐತಿಹಾಸಿಕ ಕನಿಷ್ಠ ಪ್ರಮಾಣಕ್ಕೆ ಕುಸಿದಿದ್ದು, 68.61ಕ್ಕೆ ಇಳಿದು, ನಿಮ್ಮ ವಯಸ್ಸನ್ನೂ ಮೀರಿದೆ. ನೀವು ಆಶ್ವಾಸನೆ ನೀಡಿದಂತೆ ಒಂದು ಡಾಲರ್‍ಗೆ 45 ರೂಪಾಯಿ ಮೌಲ್ಯ ಎಂದು ದಾಖಲಾಗುತ್ತದೆ?" ಎಂದು ಅಣಕಿಸಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮೋದಿ ಸದಾ ಸಿಂಗ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. ಗೌರವಾನ್ವಿತ ಅರ್ಥಶಾಸ್ತ್ರಜ್ಞ ಎಂಬ ಮನಮೋಹನ್ ಸಿಂಗ್ ಅವರ ಹೆಗ್ಗಳಿಕೆಯನ್ನೇ ಅಣಕಿಸುತ್ತಿದ್ದರು. ಮೋದಿ ವಿರೋಧ ಪಕ್ಷದಲ್ಲಿದ್ದಾಗ, ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಮಾಡಿದ್ದ ಕೆಲ ಟ್ವೀಟ್‍ಗಳು ಇಲ್ಲಿವೆ:
"ಕಾಂಗ್ರೆಸ್ ಹಾಗೂ ರೂಪಾಯಿ ನಡುವೆ ಹೋಲಿಕೆ ಇದೆ. ಯಾರು ಕನಿಷ್ಠಮಟ್ಟಕ್ಕೆ ಕುಸಿಯುತ್ತಾರೆ, ಇದು ಸ್ಪರ್ಧೆ": 2013ರ ಜೂನ್ 23.
"ನಾವು ಸ್ವಾತಂತ್ರ್ಯ ಗಳಿಸಿದಾಗ 1 ರೂಪಾಯಿ 1 ಡಾಲರ್‍ಗೆ ಸಮನಾಗಿತ್ತು. ಇಂದು ಬೆಲೆಯನ್ನು ನೋಡಿ...ರೂಪಾಯಿ ಕುಸಿಯುತ್ತಿದೆ: 2013ರ ಜುಲೈ 14.
ಅಟಲ್‍ಜೀಯವರ ಅವಧಿಯಲ್ಲಿ ರೂಪಾಯಿ ಸ್ಥಿತಿ ಏನಾಗಿತ್ತು ಹಾಗೂ ಅರ್ಥಶಾಸ್ತ್ರಜ್ಞ ಪ್ರಧಾನಿಯ ಅವಧಿಯಲ್ಲಿ ಏನಾಗಿದೆ?, ಬೆಲೆ ಅಂದು ಮತ್ತು ಇಂದು ಎಲ್ಲಿವೆ? ಎಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ?: 2013ರ ಜುಲೈ 14.
"ಪ್ರಧಾನಿಯವರೇ, ನೀವು ನರಸಿಂಹರಾವ್ ಅವರನ್ನು ಉಲ್ಲೇಖಿಸಿದ್ದೀರಿ. ಆದರೆ ರೂಪಾಯಿ ಕುಸಿತದ ಹಾದಿಗೆ ಯಾರು ಹೊಣೆ: 2013ರ ಆಗಸ್ಟ್ 15.
ರೂಪಾಯಿ ಐಸಿಯುನಲ್ಲಿದೆ. ಆದ್ದರಿಂದ ನಾವು ಬಹುಮಾನದ ಹಣವನ್ನು ಹೆಚ್ಚಿಸುವ ಬಗ್ಗೆ ಚಿಂತಿಸಬೇಕು: 5ನೇ ಸೆಪ್ಟೆಂಬರ್, 2013.
ಕಾಂಗ್ರೆಸ್‍ಗೆ ಪ್ರಶ್ನೆ ಎಂದರೆ ನಾವು ಸರ್ಕಾರವನ್ನು ರಕ್ಷಿಸಬೇಕೇ ಅಥವಾ ಕುಸಿಯುತ್ತಿರುವ ರೂಪಾಯಿಯನ್ನೇ?: 2013ರ ಸೆಪ್ಟೆಂಬರ್ 10.
ಡಾಲರ್ ಎದುರು ರೂಪಾಯಿ ಉರುಳುತ್ತಿದೆ. ಕಾಂಗ್ರೆಸ್‍ನ ಕಾರಣದಿಂದ ಇಂದು ರೂಪಾಯಿ ಐಸಿಯುನಲ್ಲಿದೆ: 2013ರ ನವೆಂಬರ್ 14.
ಇಷ್ಟೆಲ್ಲದರ ನಡುವೆಯೂ ಅಟಲ್‍ಜೀ ರೂಪಾಯಿ ಮೌಲ್ಯ ಕುಸಿಯಲು ಅವಕಾಶ ನೀಡಲಿಲ್ಲ. ಆರ್ಥಿಕತೆ ಪ್ರಬಲವಾಗಿತ್ತು. ಆದರೆ ಇಂದು ಅರ್ಥಶಾಸ್ತ್ರಜ್ಞ ಪ್ರಧಾನಿಯ ಅಧೀನದಲ್ಲಿ ಏನಾಗುತ್ತಿದೆ ನೋಡಿ: 2013ರ ನವೆಂಬರ್ 25.