×
Ad

ಸಾವನ್ನಪ್ಪುವ ಒಂದು ಗಂಟೆಗೆ ಮೊದಲು ತನ್ನ ತಂದೆಗೆ ನಿರ್ವಹಣಾ ಎಂಜಿನಿಯರ್ ಹೇಳಿದ್ದೇನು?

Update: 2018-06-29 22:22 IST

 ಮುಂಬೈ, ಜೂ. 29: ಲಘು ವಿಮಾನವೊಂದು ಗುರುವಾರ ಮುಂಬೈಯ ಉಪ ನಗರದಲ್ಲಿ ಪತನಗೊಂಡ ಒಂದು ಗಂಟೆಗೆ ಮುನ್ನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಓರ್ವರಾಗಿರುವ ನಿರ್ವಹಣಾ ಎಂಜಿನಿಯರ್ ಸುರಭಿ ಗುಪ್ತಾ ಸೋನೆಪತ್‌ನಲ್ಲಿರುವ ತನ್ನ ತಂದೆಗೆ ಫೋನ್ ಕರೆ ಮಾಡಿ ತಾನು ‘ದೋಷಪೂರಿತ ವಿಮಾನ’ದಲ್ಲಿ ಪ್ರಯಾಣಿಸುತ್ತಿದ್ದೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ. ಸುರಭಿ ಗುರುವಾರ ಬೆಳಗ್ಗೆ ತನ್ನ ತಂದೆಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ ಹಾಗೂ ವಿಮಾನದ ದೋಷದ ಬಗ್ಗೆ ತಂದೆಯಲ್ಲಿ ವಿವರಿಸಿದ್ದಾರೆ. ‘‘ನಿನ್ನೆ ಬೆಳಗ್ಗೆ ಅವರು ಫೋನ್‌ನಲ್ಲಿ ಮಾತನಾಡಿದ್ದರು. ತಾನು ಪ್ರಯಾಣಿಸುತ್ತಿರುವ ವಿಮಾನ ಜೀರ್ಣಾವಸ್ಥೆಯಲ್ಲಿದೆ ಎಂದು ಹೇಳಿದ್ದರು. ವಿಮಾನ ದುಸ್ಥಿತಿಯಲ್ಲಿದೆ ಎಂದು ತಿಳಿಸಿದ್ದರು. ’’ ಎಂದು ಸುರಭಿ ತಂದೆ ಎಸ್.ಪಿ. ಗುಪ್ತಾ ಸೋನೆಪತ್‌ನ ತನ್ನ ನಿವಾಸದಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇಂತಹ ದೋಷಪೂರಿತ ವಿಮಾನಕ್ಕೆ ಹಾರಾಟ ನಡೆಸಲು ಅನುಮತಿ ನೀಡಿದವರು ಯಾರು ಎಂದು ಅವರು ಪ್ರಶ್ನಿಸಿದ್ದಾರೆ. ಇದೇ ಸಂದರ್ಭ, ಪ್ರಾಧಿಕಾರ ಅಪಘಾತಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆ ನಡೆಸುವ ಹಾಗೂ ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಅವರು ಹೇಳಿದರು.

ಸುರಭಿ ಕಳೆದ ವರ್ಷ ವಿವಾಹವಾಗಿದ್ದರು. ಅವರ ಪತಿ ಕೂಡ ಪೈಲೆಟ್. ಇತ್ತೀಚೆಗೆ ಅವಳನ್ನು ಮಹಾರಾಷ್ಟ್ರ ಸರಕಾರ ಗೌರವಿಸಿತ್ತು ಆಕೆ ಧೈರ್ಯಶಾಲಿ ಮಹಿಳೆ ಎಂದು ಅವರು ಹೇಳಿದ್ದಾರೆ.

22 ವರ್ಷ ಹಳೆಯ ವಿಮಾನ ಮುಂಬೈಯಲ್ಲಿ ಅಪಘಾತಕ್ಕೀಡಾದ ಬೀಚ್‌ಕ್ರಾಫ್ಟ್ ಕಿಂಗ್ ಸಿ90 ವಿಮಾನವನ್ನು ಮುಂಬೈ ಮೂಲದ ಕಂಪೆನಿ ನಿರ್ಮಿಸಿತ್ತು. 2015ರಲ್ಲಿ 22 ವರ್ಷ ಹಳೆಯ ಈ ವಿಮಾನವನ್ನು ಉತ್ತರ ಪ್ರದೇಶದ ಸರಕಾರದಿಂದ ಖರೀದಿಸಿದ ಬಳಿಕ ದುರಸ್ಥಿಗೆ 8 ಕೋ. ರೂ. ವೆಚ್ಚ ಮಾಡಲಾಗಿತ್ತು. ಉತ್ತರಪ್ರದೇಶದಲ್ಲಿ 2009-2010ರ ನಡುವೆ ಈ ವಿಮಾನ ಸಣ್ಣಪುಟ್ಟ ಅಪಘಾತಕ್ಕೆ ಒಳಗಾಗಿತ್ತು ಎಂದು ಯು.ವೈ. ಏವಿಯೇಶನ್‌ನ ಹಿರಿಯ ಅಧಿಕಾರಿ ಶ್ರೀಕೃಷ್ಣ ವಿನೋದ್ ತಿಳಿಸಿದ್ದಾರೆ.

‘‘ಉತ್ತರಪ್ರದೇಶದಲ್ಲಿ ಈ ವಿಮಾನವನ್ನು ಸರಕಾರದ ಉದ್ದೇಶಕ್ಕೆ ಅಧಿಕೃತ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ರಾಜ್ಯದಲ್ಲಿ ಈ ವಿಮಾನ ಸಣ್ಣಪುಟ್ಟ ಅಪಘಾತಕ್ಕೆ ಒಳಗಾಗಿತ್ತು. ಅನಂತರ 2015ರಲ್ಲಿ ಖರೀದಿಯಾಗುವವರೆಗೆ ಈ ವಿಮಾನವನ್ನು ಹಾರಾಟಕ್ಕೆ ಬಳಸುತ್ತಿರಲಿಲ್ಲ.’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News