ಕಪ್ಪು ಹಣವೇ ಇಲ್ಲ ಎಂದು ಮೋದಿ ಹೇಳಿದ್ದರು: ರಾಹುಲ್ ವ್ಯಂಗ್ಯ
ಹೊಸದಿಲ್ಲಿ, ಜೂ. 29: ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯ ಹಣ ಅಧಿಕವಾಗಿರುವುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಈ ಹಿಂದೆ ಮೋದಿ ಅವರು ಭಾರತೀಯರು ಜಮೆ ಮಾಡಿದ ಬಿಳಿ ಹಣ ಶೇ. 50ರಷ್ಟು ಏರಿಕೆಯಾಗಿದೆ. ಆದುದರಿಂದ ಕಪ್ಪು ಹಣ ಇಲ್ಲ ಎಂದು ಹೇಳಿದ್ದರು ಎಂದು ಆರೋಪಿಸಿದ್ದಾರೆ.
“ಸ್ವಿಸ್ ಬ್ಯಾಂಕ್‌ನಲ್ಲಿರುವ ಎಲ್ಲ ಕಪ್ಪು ಹಣವನ್ನು ನಾನು ಹಿಂದೆ ತರುತ್ತೇನೆ ಹಾಗೂ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ ಮಾಡುತ್ತೇನೆ ಎಂದು ಅವರು 2014ರಲ್ಲಿ ಹೇಳಿದ್ದರು. ನಗದು ನಿಷೇಧದಿಂದ ಕಪ್ಪು ಹಣ ನಾಶವಾಗುತ್ತದೆ ಎಂದು ಕೂಡ ಅವರು ಹೇಳಿದ್ದರು ಎಂದು ರಾಹುಲ್ ಗಾಂಧಿ ನೆನಪಿಸಿದರು. ಕಪ್ಪು ಹಣ ನಾಶ ಮಾಡಲಾಗುವುದು ಎಂಬ ಕೇಂದ್ರ ಸರಕಾರದ ಪ್ರತಿಪಾದನೆ ಕುರಿತು ಪ್ರಧಾನಿ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್, ಯುಪಿಎ ಸರಕಾರದ ಅವಧಿಯಲ್ಲಿ ಸ್ವಿಸ್ ಬ್ಯಾಂಕ್ ಠೇವಣಿ ಇಳಿಕೆಯಾಗಿತ್ತು.
ಆದರೆ, ಮೋದಿ ಸರಕಾರದ ಅವಧಿಯಲ್ಲಿ ಶೇ. 50 ರಷ್ಟು ಏರಿಕೆಯಾಗಿದೆ ಎಂದಿದೆ. ಸ್ವಿಸ್ ಬ್ಯಾಂಕ್ ಠೇವಣಿ ಮನಮೋಹನ್ ಸಿಂಗ್ ಅವರ ಅಧಿಕಾರವಧಿಯಲ್ಲಿ ಇಳಿಕೆಯಾಗಿತ್ತು. ಪ್ರಧಾನಿ ಮೋದಿ ಅವರ ಅಧಿಕಾರವಧಿಯಲ್ಲಿ ದಾಖಲಾರ್ಹ ಮಟ್ಟಕ್ಕೆ ತಲುಪಿದೆ. ನಗದು ನಿಷೇಧದ ಬಳಿಕ ಶೇ. 50.2ಕ್ಕೆ ಏರಿಕೆಯಾಗಿದೆ. ಇದು 2004ರ ಬಳಿಕ ಗರಿಷ್ಠ ಏರಿಕೆ ಎಂದು ಕಾಂಗ್ರೆಸ್ ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹೇಳಿದೆ. ಪ್ರಧಾನಿ ಅವರ ಭ್ರಷ್ಟಾಚಾರ ನಿರ್ಮೂಲನೆ, ಕಪ್ಪು ಹಣ ಹಿಂದಕ್ಕೆ ತರುವುದು ಏನಾಯಿತು ಎಂದು ಕಾಂಗ್ರೆಸ್ ವಕ್ತಾರ ಆರ್.ಪಿ.ಎನ್. ಸಿಂಗ್ ಪ್ರಶ್ನಿಸಿದ್ದಾರೆ.