ಪುತ್ರ ಅಂತರ್ಧರ್ಮೀಯ ವಿವಾಹವಾಗಿದ್ದೇ ತಪ್ಪಾಯ್ತು: ತಂದೆಯಿಂದ ಉಗುಳು ನೆಕ್ಕಿಸಿದ ದುಷ್ಕರ್ಮಿಗಳು

Update: 2018-07-01 14:57 GMT

ಬುಲಂದ್‌ಶಹರ್ (ಉತ್ತರಪ್ರದೇಶ), ಜು. 2: ಪುತ್ರ ಬೇರೊಂದು ಧರ್ಮದ ಯುವತಿಯನ್ನು ವಿವಾಹವಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ತನ್ನ ಉಗುಳನ್ನೇ ನೆಕ್ಕುವಂತೆ ತಂದೆಯನ್ನು ಬಲವಂತಪಡಿಸಿದ ಅಮಾನವೀಯ ಘಟನೆ ಬುಲಂದ್‌ಶಹರ್‌ನ ಸೊಂಡಾ ಹಬೀಬ್‌ಪುರ್ ಗ್ರಾಮದಲ್ಲಿ ನಡೆದಿದೆ.

ಈ ಪ್ರಕರಣದ ಕುರಿತು ಖುರ್ಜಾ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಕೃಷ್ಣ ಬುಲಂದ್‌ಶಹರ್‌ನ ಸೊಂಡಾ ಹಬೀಬ್‌ಪುರ್ ಗ್ರಾಮದ ನಿವಾಸಿ. ಅವರ 21 ವರ್ಷದ ಪುತ್ರ ಶಿವಕುಮಾರ್ ಅದೇ ಗ್ರಾಮದ ನಿವಾಸಿ ರಝಿಯಾ (18)ಳೊಂದಿಗೆ ಜೂನ್ 6ರಂದು ಪರಾರಿಯಾಗಿದ್ದ. ಈ ಸಂಬಂಧ ರಝಿಯಾ ಹೆತ್ತವರು ಪೊಲೀಸ್ ದೂರು ನೀಡಿದ್ದರು. ಶ್ರೀಕೃಷ್ಣ ಜೂನ್ 19ರಂದು ಅವರಿಬ್ಬರನ್ನು ದಿಲ್ಲಿಯಲ್ಲಿ ಪತ್ತೆ ಮಾಡಿ ಗ್ರಾಮಕ್ಕೆ ಕರೆ ತಂದಿದ್ದರು ಹಾಗೂ ಯುವತಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯದಲ್ಲಿ ರಝಿಯಾ ತನ್ನ ಸ್ವಂತ ಇಚ್ಛೆಯಿಂದ ಶಿವ ಕುಮಾರ್‌ನೊಂದಿಗೆ ತೆರಳುವುದಾಗಿ ಹೇಳಿದ್ದಳು. ನ್ಯಾಯಾಲಯದ ಅನುಮತಿ ಹಿನ್ನೆಲೆಯಲ್ಲಿ ಶಿವಕುಮಾರ್ ಹಾಗೂ ರಝಿಯಾ ವಿವಾಹವಾಗಿದ್ದರು. ಭೀತಿಯ ಕಾರಣಕ್ಕೆ ಶ್ರೀಕೃಷ್ಣ ತನ್ನ ಮಗನಿಗೆ ಗ್ರಾಮ ತ್ಯಜಿಸುವಂತೆ ಹೇಳಿದ್ದರು. ಅದರಂತೆ ದಂಪತಿ ಗ್ರಾಮ ತ್ಯಜಿಸಿದ್ದರು.

ಜೂನ್ 26ರಂದು ಕೃಷ್ಣ ಅವರ ಸಹೋದರನಿಗೆ ಒಂದು ಫೋನ್ ಕರೆ ಬಂದಿತ್ತು. ಯುವತಿಯ ಕುಟುಂಬ ಈ ಪ್ರಕರಣವನ್ನು ಇತ್ಯರ್ಥ ಮಾಡಲು ಬಯಸಿದ್ದಾರೆ. ಆದುದರಿಂದ ಕೃಷ್ಣ ಅವರನ್ನು ಪಂಚಾಯತ್‌ಗೆ ಕರೆದುಕೊಂಡು ಬರುವಂತೆ ತಿಳಿಸಲಾಗಿತ್ತು. ಕೃಷ್ಣ ತನ್ನ ಇಬ್ಬರು ಸಹೋದರರೊಂದಿಗೆ ಸ್ಥಳಕ್ಕೆ ತಲುಪಿದಾಗ ಅಲ್ಲಿ ಯಾವುದೇ ಪಂಚಾಯತ್ ಕರೆದಿರಲಿಲ್ಲ.

ಅಲ್ಲಿ ಸುಮಾರು 100 ಜನರು ಸೇರಿದ್ದರು. ಹೆಚ್ಚಿನವರು ಸ್ಥಳೀಯ ಮೇಲ್ಜಾತಿ ಜನರು ಹಾಗೂ ಯುವತಿಯ ಕುಟುಂಬದವರು. ಅಲ್ಲಿ ಕೃಷ್ಣ ಅವರು ಖುರ್ಚಿಯಲ್ಲಿ ಕುಳಿತುಕೊಂಡಾಗ ಸ್ಥಳೀಯ ನಾಯಕನೋರ್ವ ಅವರ ಕಿವಿ ಎಳೆದು ನೆಲದಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ ಎಂದು ಮೂಲಗಳು ತಿಳಿಸಿವೆ.  ‘‘ನನ್ನ ಉಗುಳನ್ನೇ ನೆಕ್ಕುವಂತೆ ಹೇಳಲಾಯಿತು. ನಾನು ಹಾಗೆ ಮಾಡಲು ಒಪ್ಪಲಿಲ್ಲ. ಅದಕ್ಕಾಗಿ ಅವರು ನನಗೆ ಥಳಿಸಿದರು. ಅಂತಿಮವಾಗಿ ನಾನು ನನ್ನ ಉಗುಗಳನ್ನು ನೆಕ್ಕಿದೆ’’ ಎಂದು ಕೃಷ್ಣಾ ತಿಳಿಸಿದ್ದಾರೆ.

‘‘ಇದಲ್ಲದೆ ಕುಟುಂಬದೊಂದಿಗೆ ಗ್ರಾಮ ತ್ಯಜಿಸುವಂತೆ ತಿಳಿಸಲಾಯಿತು. ಇಲ್ಲದೇ ಇದ್ದರೆ ಘೋರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಒಡ್ಡಲಾಯಿತು. ನಾನು ಗ್ರಾಮ ತ್ಯಜಿಸಲು ನಿರಾಕರಿಸಿದಾಗ ಅವರು ನನಗೆ ಥಳಿಸಿದರು. ಇಬ್ಬರು ನನ್ನನ್ನು ದೂರ ಕರೆದೊಯ್ಯುವ ವರೆಗೆ ನನಗೆ ಥಳಿಸಿದರು’’ ಎಂದು ಅವರು ಹೇಳಿದ್ದಾರೆ. ಈಗ ಕೃಷ್ಣ ಗ್ರಾಮ ತ್ಯಜಿಸಿದ್ದಾರೆ ಹಾಗೂ ಪೊಲೀಸ್ ಠಾಣೆ ಸಮೀಪ ವಾಸಿಸುತ್ತಿದ್ದಾರೆ. ಅವರ ಕುಟುಂಬ ಅದೇ ಗ್ರಾಮದಲ್ಲಿ ವಾಸಿಸುತ್ತಿದೆ. ಅವರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.

 ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಹಾಗೂ ಯುವತಿಯ ತಂದೆ ಭುರಾ ಖಾನ್, ನಾರಾಯಣ ಸೋಲಂಕಿ, ಖಿಲ್ಲು, ಕುಲ್‌ದೀಪ್ ಹಾಗೂ ವಿಷ್ಣು ಅವರನ್ನು ಆರೋಪಿಗಳು ಎಂದು ಗುರುತಿಸಲಾಗಿದೆ. ಭುರಾ ಖಾನ್ ಹಾಗೂ ಖಿಲ್ಲು ಅವರನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕ್ಷಕ ಕೃಷ್ಣ ಬಹದ್ದೂರ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News