ಜೋರ್ಡಾನ್ ಮಧ್ಯಸ್ಥಿಕೆಯಲ್ಲಿ ಮುಂದುವರಿದ ರಶ್ಯ-ಸಿರಿಯ ಬಂಡುಕೋರರ ಮಾತುಕತೆ

Update: 2018-07-01 16:22 GMT

ಅಮ್ಮಾನ್ (ಜೋರ್ಡಾನ್), ಜು. ೧: ಜೋರ್ಡಾನ್ ಮಧ್ಯಪ್ರವೇಶದ ಬಳಿಕ, ನೈರುತ್ಯ ಸಿರಿಯದಲ್ಲಿರುವ ಬಂಡುಕೋರ ನಿಯಂತ್ರಣದ ಪಟ್ಟಣ ಬುಸ್ರಾ ಅಲ್-ಶಾಮ್‌ನಲ್ಲಿ ಯುದ್ಧವಿರಾಮ ಜಾರಿಗೆ ತರುವ ಸಂಬಂಧ ಸಿರಿಯ ಪ್ರತಿಪಕ್ಷ ಮತ್ತು ರಶ್ಯ ಸಂಧಾನಕಾರರ ನಡುವಿನ ಮಾತುಕತೆಗಳು ರವಿವಾರ ಪುನಾರಂಭಗೊಂಡಿವೆ.

ಭಾರೀ ಪ್ರಮಾಣದ ಬಾಂಬ್ ದಾಳಿಗಳ ಹಿನ್ನೆಲೆಯಲ್ಲಿ, ನೈರುತ್ಯ ಸಿರಿಯದ ಹಲವು ಭಾಗಗಳಲ್ಲಿ ಬಂಡುಕೋರರ ಪೂರೈಕೆ ಮಾರ್ಗಗಳು ಪತನಗೊಂಡಿವೆ. ಹಾಗಾಗಿ, ಈ ವಲಯದ ಹಲವಾರು ಬಂಡುಕೋರ ನಿಯಂತ್ರಣದ ಪಟ್ಟಣಗಳು ಸರಕಾರಿ ಆಳ್ವಿಕೆಯನ್ನು ಒಪ್ಪಿಕೊಳ್ಳುವ ಅನಿವಾರ್ಯತೆಗೆ ಸಿಲುಕಿವೆ.

‘ಫ್ರೀ ಸಿರಿಯನ್ ಆರ್ಮಿಸ್ (ಎಫ್‌ಎಸ್‌ಎ)’ನ ಬಂಡುಕೋರರನ್ನು ಪ್ರತಿನಿಧಿಸುವ ತಂಡವೊಂದನ್ನು ಭೇಟಿಯಾದ ರಶ್ಯನ್ ಸಂಧಾನಕಾರರು, ಸಂಪೂರ್ಣ ಶರಣಾಗತಿ ಹೊಂದುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ, ಬುಸ್ರಾ ಅಲ್-ಶಾಮ್‌ನಲ್ಲಿ ಶನಿವಾರ ಮಾತುಕತೆಗಳು ಮುರಿದುಬಿದ್ದಿದ್ದವು.

ಆದರೆ, ರವಿವಾರ ಜೋರ್ಡಾನ್ ಮಧ್ಯಪ್ರವೇಶಿಸಿದ ಬಳಿಕ, ಬಂಡುಕೋರರ ತಂಡವು ರಶ್ಯ ಅಧಿಕಾರಿಗಳೊಂದಿಗೆ ಮಾತುಕತೆಗಳನ್ನು ಮುಂದುವರಿಸಿತು ಎಂದು ಎಫ್‌ಎಸ್‌ಎ ಸಂಧಾನಕಾರರ ವಕ್ತಾರರೊಬ್ಬರು ತಿಳಿಸಿದರು.

‘‘ಜೋರ್ಡಾನ್‌ನ ಆಶ್ರಯದಲ್ಲಿ ದಕ್ಷಿಣ ಸಿರಿಯದಲ್ಲಿ ರಶ್ಯ ತಂಡ ಮತ್ತು ಪ್ರತಿಪಕ್ಷಗಳ ಪ್ರತಿನಿಧಿಗಳ ನಡುವೆ ರವಿವಾರ ಬೆಳಗ್ಗೆ ಮಾತುಕತೆ ಮುಂದುವರಿದಿದೆ’’ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News