×
Ad

ಅರ್ಜೆಂಟೀನದ ಹಿರಿಯ ಆಟಗಾರ ಮಸ್ಕರನೊ ನಿವೃತ್ತಿ

Update: 2018-07-01 23:50 IST

ಕಝಾನ್, ಜು.1: ಅರ್ಜೆಂಟೀನ ತಂಡ ಫ್ರಾನ್ಸ್ ವಿರುದ್ಧ ಫಿಫಾ ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸೋತ ಹಿನ್ನೆಲೆಯಲ್ಲಿ ಮಿಡ್ ಫೀಲ್ಟರ್ ಜೇವಿಯರ್ ಮಸ್ಕರನೊ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

34ರ ಹರೆಯದ ಮಸ್ಕರನೊ ಅರ್ಜೆಂಟೀನದ ಪರ ಈ ವರ್ಷದ ಟೂರ್ನಿಯಲ್ಲಿ ಎಲ್ಲ ನಾಲ್ಕೂ ಪಂದ್ಯಗಳನ್ನು ಆಡಿದ್ದಾರೆ. ಆದರೆ, ತನ್ನ ತಂಡ ಅಂತಿಮ-16ರ ಸುತ್ತಿನಲ್ಲೇ ಟೂರ್ನಿಯಿಂದ ಹೊರ ನಡೆಯದಂತೆ ತಡೆಯಲು ಅವರಿಂದ ಸಾಧ್ಯವಾಗಲಿಲ್ಲ.

2003ರಲ್ಲಿ ಅರ್ಜೆಂಟೀನದ ಪರ ಚೊಚ್ಚಲ ಪಂದ್ಯವನ್ನಾಡಿರುವ ಮಸ್ಕರನೊ ಈ ತನಕ ಒಟ್ಟು 145 ಪಂದ್ಯಗಳನ್ನು ಆಡಿದ್ದಾರೆ. ಕೇವಲ ಮೂರು ಗೋಲು ಬಾರಿಸಿದ್ದಾರೆ. 2004 ಹಾಗೂ 2008ರಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವುದು ಅವರ ಸಾಧನೆಯಾಗಿದೆ.

ಮಸ್ಕರನೊ ನಾಲ್ಕನೇ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಿದ್ದಾರೆ. 2014ರಲ್ಲಿ ಅರ್ಜೆಂಟೀನ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಎತ್ತಿ ಹಿಡಿಯಲು ವಿಫಲವಾಗಿತ್ತು. ಮಸ್ಕರನೊ ಕೋಪಾ ಅಮೆರಿಕ ಟೂರ್ನಿಯಲ್ಲಿ ನಾಲ್ಕು ಬಾರಿ ರನ್ನರ್ಸ್-ಅಪ್ ಪ್ರಶಸ್ತಿ ಪಡೆದಿದ್ದಾರೆ.

2010ರಿಂದ ಈ ವರ್ಷದ ಜನವರಿ ತನಕ ಬಾರ್ಸಿಲೋನ ಎಫ್‌ಸಿ ಪರ ಆಡಿರುವ ಮಸ್ಕರನೊ ಎರಡು ಬಾರಿ ಚಾಂಪಿಯನ್ಸ್ ಲೀಗ್, ಐದು ಬಾರಿ ಲಾಲಿಗ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News