ಮದ್ಯದ ಬಾಟಲಿ ಪತ್ತೆ: ಬಿಜೆಪಿ ಶಾಸಕನ ಪುತ್ರ ಸಹಿತ ಐವರ ಬಂಧನ
ಪಾಟ್ನ, ಜು.2: ಮದ್ಯಪಾನ ನಿಷೇಧ ಕಾನೂನನ್ನು ಉಲ್ಲಂಘಿಸಿದ ಕಾರಣಕ್ಕೆ ಸಿವಾನ್ ಕ್ಷೇತ್ರದ ಬಿಜೆಪಿ ಶಾಸಕ ವ್ಯಾಸದೇವ್ ಪ್ರಸಾದ್ ಅವರ ಪುತ್ರ ಹಾಗೂ ಆತನ ನಾಲ್ವರು ಸ್ನೇಹಿತರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧ ಜಾರಿಯಲ್ಲಿದೆ. ಉ.ಪ್ರದೇಶ- ಬಿಹಾರದ ಗಡಿಭಾಗದಲ್ಲಿರುವ ಪ್ರದೇಶದಲ್ಲಿದ್ದ ಈ ಐವರ ಬಳಿ ಮದ್ಯದ ಬಾಟಲಿ ಇರುವುದನ್ನು ಪತ್ತೆಹಚ್ಚಿದ ಪೊಲೀಸರು ತಕ್ಷಣ ಬಂಧಿಸಿದ್ದಾರೆ.
2016ರಲ್ಲಿ ರಾಜ್ಯ ಸರಕಾರ ಸಂಪೂರ್ಣ ಪಾನ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು ಕಾಯ್ದೆಯನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಸರಕಾರದ ಮಾಹಿತಿಯ ಪ್ರಕಾರ ಕಾನೂನು ಉಲ್ಲಂಘಿಸಿದ ಕಾರಣಕ್ಕೆ 1.15 ಲಕ್ಷಕ್ಕೂ ಹೆಚ್ಚು ಮಂದಿಯನ್ನು ಇದುವರೆಗೆ ಬಂಧಿಸಲಾಗಿದೆ. ಈ ಮಧ್ಯೆ, ಬಿಹಾರದಲ್ಲಿ ಸಂಪೂರ್ಣ ಪಾನನಿಷೇಧ ಕಾಯ್ದೆ ಜಾರಿಯಿಂದ ಜನಜೀವನದ ಮೇಲೆ ಆಗಿರುವ ಪರಿಣಾಮವನ್ನು ಅಧ್ಯಯನ ಮಾಡಲು ಛತ್ತೀಸ್‌ಗಢದ 11ಸದಸ್ಯರ ತಂಡವೊಂದು ಬಿಹಾರಕ್ಕೆ ಆಗಮಿಸಿದೆ.