ಲೈಂಗಿಕ ಕಿರುಕುಳ ಆರೋಪ: ಅಂಕಿತ್ ತಿವಾರಿ ತಂದೆಗೆ ಚಪ್ಪಲಿ ಏಟು ನೀಡಿದ ಕ್ರಿಕೆಟಿಗ ಕಾಂಬ್ಳಿ ಪತ್ನಿ
ಮುಂಬೈ, ಜು. 2: ಮಾಜಿ ಬ್ಯಾಟ್ಸ್‌ಮ್ಯಾನ್ ವಿನೋದ್ ಕಾಂಬ್ಳಿ ಅವರ ಪತ್ನಿ ತನಗೆ ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಖ್ಯಾತ ಹಿನ್ನೆಲೆ ಗಾಯಕ ಅಂಕಿತ್ ತಿವಾರಿ ಅವರ ತಂದೆ ರಾಜ್ ಕುಮಾರ್ ತಿವಾರಿ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಕಾಂಬ್ಳಿ ಪತ್ನಿ, ರಾಜ್ ಕುಮಾರ್ ತಿವಾರಿ ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ಕಾಂಬ್ಳಿ, ಅವರ ಪತ್ನಿ ಹಾಗೂ ರಾಜ್‌ಕುಮಾರ್ ತಿವಾರಿ ಪೊಲೀಸ್ ಠಾಣೆಯಲ್ಲಿ ಪರಸ್ಪರ ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ. ತಾನು ಮತ್ತು ತನ್ನ ಕುಟುಂಬ ಮುಂಬೈಯ ಪಾಪ್ಯುಲರ್ ಮಾಲ್‌ನಲ್ಲಿ ರವಿವಾರ ಸಮಯ ಕಳೆಯುತ್ತಿದ್ದಾಗ ಕಾಂಬ್ಳಿ ಅವರ ಪತ್ನಿ ಆ್ಯಂಡ್ರಿಯಾ ಹೆವಿಟ್ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 59ರ ಹರೆಯದ ರಾಜ್ ಕುಮಾರ್ ತಿವಾರಿ ಆರೋಪಿಸಿದ್ದಾರೆ. ಹೆವಿಟ್ ನನಗೆ ಚಪ್ಪಲಿಯಿಂದ ಥಳಿಸಿದ್ದಾರೆ. ವಿನೋದ್ ಕಾಂಬ್ಳಿ ಅವರ ಬಾಡಿಗಾರ್ಡ್ ಥಳಿತದಿಂದ ನನ್ನ ಕಿರಿಯ ಪುತ್ರನಿಗೆ ಗಾಯವಾಗಿದೆ ಎಂದು ರಾಜ್ ಕುಮಾರ್ ತಿವಾರಿ ಹೇಳಿದ್ದಾರೆ. ರಾಜ್‌ಕುಮಾರ್ ತಿವಾರಿ ಅವರು ಉದ್ದೇಶಪೂರ್ವಕವಾಗಿ ಸ್ಪರ್ಶಿಸಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಹಾಗೂ ಅವರ ಪತ್ನಿ ಆರೋಪಿಸಿದ್ದಾರೆ. ‘‘ಕೆಲವು ದುಷ್ಕರ್ಮಿಗಳು ನನ್ನ ಪತ್ನಿಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದರು. ಪ್ರಶ್ನಿಸಿದಾಗಿ ಹಲ್ಲೆ ನಡೆಸಲು ತನ್ನ ಪುತ್ರನನ್ನು ಕರೆ ತಂದರು. ವಿಷಾದದ ವಿಚಾರ, ಮತ್ತ ಮಹಿಳಾ ಸುರಕ್ಷೆಯ ಪ್ರಶ್ನೆ ಉದ್ಬವಿಸಿದೆ’’ ಎಂದು ಕಾಂಬ್ಳಿ ನಿನ್ನೆ ಟ್ವೀಟ್ ಮಾಡಿದ್ದರು. ‘‘ನಾನು ಕೂಡ ಪೊಲೀಸರಿಗೆ ದೂರು ನೀಡಿದ್ದೇನೆ.’’ ಎಂದು ಕಾಂಬ್ಳಿ ಟ್ವೀಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದಾರೆ. ಪ್ರಸ್ತುತ ಪೊಲೀಸರು ಈ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.