ಬಿಜೆಪಿ ಸೇರಿದ ಹಿರಿಯ ಕಾಂಗ್ರೆಸ್ ಮುಖಂಡ

Update: 2018-07-03 15:25 GMT

ಅಹ್ಮದಾಬಾದ್, ಜು.3: ಗುಜರಾತ್‌ನ ಹಿರಿಯ ಕಾಂಗ್ರೆಸ್ ಶಾಸಕ ಹಾಗೂ ಕೋಲಿ ಸಮುದಾಯದ ಪ್ರಭಾವೀ ಮುಖಂಡ ಕನ್ವರ್‌ಜಿ ಬವಾಲಿಯಾ ಮಂಗಳವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಅವರಿಗೆ ಸಚಿವ ಹುದ್ದೆ ದೊರಕುವ ಸಾಧ್ಯತೆಯಿದೆ ಎನ್ನಲಾಗಿದೆ.

ಗುಜರಾತ್ ವಿಧಾಸಭೆಯ ಸ್ಪೀಕರ್ ರಾಜೇಂದ್ರ ತ್ರಿವೇದಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಿದ ಬಳಿಕ ನೇರವಾಗಿ ರಾಜ್ಯ ಬಿಜೆಪಿಯ ಪ್ರಧಾನ ಕಚೇರಿಗೆ ಆಗಮಿಸಿದ ಬವಾಲಿಯಾರ ಅಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದ ಕಾಂಗ್ರೆಸ್ ಘಟಕದ ಜವಾಬ್ದಾರಿಯನ್ನು ಯುವ ನಾಯಕರಾದ ರಾಜ್ಯ ಘಟಕಾಧ್ಯಕ್ಷ ಅಮಿತ್ ಚಾವ್ಡ ಹಾಗೂ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಪರೇಶ್ ಧನಾನಿಗೆ ಒಪ್ಪಿಸಿರುವ ಬಗ್ಗೆ ಬವಾಲಿಯಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಲ್ಲಿ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ರಾಹುಲ್ ಗಾಂಧಿ ವೋಟ್‌ಬ್ಯಾಂಕ್‌ಗಾಗಿ ಜಾತಿ ರಾಜಕಾರಣ ನಡೆಸುತ್ತಿರುವುದರಿಂದ ಬೇಸತ್ತು ಹಾಗೂ ಪ್ರಧಾನಿ ಮೋದಿಯವರು ದೇಶವನ್ನು ಮುನ್ನಡೆಸುತ್ತಿರುವ ರೀತಿಯಿಂದ ಪ್ರಭಾವಿತಗೊಂಡು ಬಿಜೆಪಿ ಸೇರುತ್ತಿದ್ದೇನೆ ಎಂದು ಬವಾಲಿಯಾ ತಿಳಿಸಿದ್ದಾರೆ.

ಬವಾಲಿಯಾ ಸೇರ್ಪಡೆಯಿಂದ ಬಿಜೆಪಿ ಇನ್ನಷ್ಟು ಬಲಿಷ್ಟವಾಗಿದೆ ಎಂದು ಬಿಜೆಪಿ ಹೇಳಿದ್ದರೆ, ಬವಾಲಿಯಾ ವಿಶ್ವಾಸದ್ರೋಹ ಎಸಗಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News