ಜಗತ್ತಿನ ಅತ್ಯಂತ ಕಠಿಣ ಟ್ರಯಥ್ಲಾನ್ ಸ್ಪರ್ಧೆ ಪೂರ್ಣಗೊಳಿಸಿದ ಭಾರತದ ಸೇನಾಧಿಕಾರಿ
ಹೊಸದಿಲ್ಲಿ, ಜು. ೩: ಮೇಜರ್ ಜನರಲ್ ವಿ.ಡಿ. ದೋಗ್ರಾ ಆಸ್ಟ್ರಿಯಾದಲ್ಲಿ ರವಿವಾರ ಆಯೋಜಿಸಲಾಗಿದ್ದ ‘ಉಕ್ಕಿನ ಮನುಷ್ಯ’ ಸ್ಪರ್ಧೆ ಪೂರ್ಣಗೊಳಿಸಿದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಮೊದಲ ಅಧಿಕಾರಿ ಹಾಗೂ ವಿಶ್ವದ ಏಕೈಕ ಜನರಲ್ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
3.8 ಕಿ.ಮೀ. ಈಜು, 180 ಕಿ.ಮೀ. ಸೈಕ್ಲಿಂಗ್ ಹಾಗೂ 42.2 ಕಿ.ಮೀ. ಓಟ (ಪೂರ್ಣ ಮ್ಯಾರಥಾನ್)ದ ಮೂರು ಕ್ರಮಾನುಗತ ಸ್ಪರ್ಧೆಯನ್ನು ಒಳಗೊಂಡ ಅಂತಾರಾಷ್ಟ್ರೀಯ ಟ್ರಯಥ್ಲಾನ್ ಈ ‘ಉಕ್ಕಿನ ಮನುಷ್ಯ’.
ಇದನ್ನು ಜಗತ್ತಿನ ಅತಿ ಕಠಿಣ ಒಂದು ದಿನದ ಕ್ರೀಡೆ ಎಂದು ಪರಿಗಣಿಸಲಾಗಿದೆ. ‘ಉಕ್ಕಿನ ಮನುಷ್ಯ’ ಬಿರುದು ಪಡೆಯಲು ಸ್ಪರ್ಧಿ 17 ಗಂಟೆಗಳ ಒಳಗೆ ಸ್ಪರ್ಧೆಗಳನ್ನು ಅನುಕ್ರಮವಾಗಿ ಪೂರ್ಣಗೊಳಿಸಬೇಕು.
ಮೇಜರ್ ಜನರಲ್ ದೋಗ್ರಾ ಸ್ಪರ್ಧೆಯನ್ನು 14 ಗಂಟೆ ಹಾಗೂ 21 ನಿಮಿಷಗಳಲ್ಲಿ ಪೂರ್ಣಗೊಳಿಸಿದ್ದಾರೆ.
ದೋಗ್ರಾ ‘ಉಕ್ಕಿನ ಮನುಷ್ಯ’ ಪೂರ್ಣಗೊಳಿಸಿದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮೊದಲ ಅಧಿಕಾರಿ ಹಾಗೂ ವಿಶ್ವದ ಏಕೈಕ ಜನರಲ್ ಎಂದು ಹೆಸರು ಹೇಳಲಿಚ್ಛಿಸದ ಸೇನಾ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಉಕ್ಕಿನ ಮನುಷ್ಯ ಆಸ್ಟ್ರಿಯಾ’ವನ್ನು ಜುಲೈ 1 ರಂದು ಕ್ಲೆಗೆನ್‌ಫರ್ಟ್‌ನಲ್ಲಿ ಆಯೋಜಿಸಲಾಗಿತ್ತು. ಈ ಸ್ಪರ್ಧೆಯಲ್ಲಿ 3000 ಕ್ಕೂ ಅಧಿಕ ಅಥ್ಲೀಟ್‌ಗಳು ಭಾಗವಹಿಸಿದ್ದರು. ಪ್ರಸ್ತುತ ಪುನರ್ವಸತಿಯ ಪ್ರಧಾನ ನಿರ್ದೇಶಕರಾಗಿ ನಿಯೋಜನೆಗೊಂಡಿರುವ ಜನರಲ್ ಡೋಗ್ರ ಕೂಡ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಅವರು ತನ್ನ ಜೀವನದ ಉದ್ದಕ್ಕೂ ಕ್ರೀಡಾಳುವಾಗಿದ್ದರು. ಐದು ವರ್ಷಗಳ ಹಿಂದೆ ಸೈಕ್ಲಿಂಗ್ ಆರಂಭಿಸಿದ್ದರು. ಲೇಹ್‌ನಿಂದ ಚಂಡಿಗಢದ ವರೆಗೆ 800 ಕಿ.ಮೀ. ದೂರವನ್ನು 8 ದಿನಗಳಲ್ಲಿ ಸೈಕ್ಲಿಂಗ್ ಮೂಲಕ ಕ್ರಮಿಸಿದ್ದರು ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.