ಇಂಡೋನೇಶ್ಯಾ ಓಪನ್: ಚೀನಾದ ದಿಗ್ಗಜ ಲಿನ್ ಡಾನ್‌ಗೆ ಪ್ರಣಯ್ ಶಾಕ್

Update: 2018-07-03 18:18 GMT

ಜಕಾರ್ತ, ಜು.3: ಇಲ್ಲಿ ನಡೆಯುತ್ತಿರುವ ಇಂಡೋನೇಶ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಎಚ್.ಎಸ್ ಪ್ರಣಯ್ ಹಾಗೂ ಸಮೀರ್ ವರ್ಮಾ ಎರಡನೇ ಸುತ್ತಿಗೆ ತಲುಪಿದ್ದಾರೆ.

ವಿಶ್ವದ ನಂ.13ನೇ ಆಟಗಾರ ಪ್ರಣಯ್ ಚೀನಾದ ಲೆಜೆಂಡ್ ಆಟಗಾರ ಲಿನ್ ಡಾನ್ ಅವರನ್ನು 21-15, 9-21, 21-14 ಗೇಮ್‌ಗಳ ಅಂತರದಿಂದ ಸೋಲಿಸುವ ಮೂಲಕ ಶಾಕ್ ನೀಡಿದ್ದಾರೆ. ಇದೇ ವೇಳೆ ಇನ್ನೋರ್ವ ಭಾರತೀಯ ಆಟಗಾರ ಸಮೀರ್ ವರ್ಮಾ ತೀವ್ರ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಡೆನ್ಮಾರ್ಕ್‌ನ ರಸ್ಮುಸ್ ಗೆಮ್ಕೆ ವಿರುದ್ಧ 21-9, 12-21, 22-20 ಗೇಮ್‌ಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಪ್ರಣಯ್, ಎಂಟನೇ ರ್ಯಾಂಕಿನ ಲಿನ್ ಡಾನ್ ವಿರುದ್ಧ ಮೊದಲ ಸುತ್ತನ್ನು 21-15ರ ಅಂತರದಲ್ಲಿ ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆದುಕೊಂಡರು. ಆದರೆ ಎರಡನೇ ಗೇಮ್‌ನಲ್ಲಿ ತಿರುಗೇಟು ನೀಡಿದ ಡಾನ್ 21-9 ಅಂತರದಲ್ಲಿ ಗೆಲ್ಲುವ ಮೂಲಕ ಪಂದ್ಯವನ್ನು ಸಮಬಲಗೊಳಿಸಿದರು. ಆದರೆ ಮೂರನೇ ಸುತ್ತಿನಲ್ಲಿ ತನ್ನೆಲ್ಲ ಶಕ್ತಿ ಮತ್ತು ಸಾಮರ್ಥ್ಯ ಬಳಸಿ ಆಡಿದ ಪ್ರಣಯ್ ಚೀನಾದ ದಿಗ್ಗಜ ಆಟಗಾರನನ್ನು 21-14 ಅಂತರದಿಂದ ಮಣಿಸುವ ಮೂಲಕ ಪಂದ್ಯ ವಶಪಡಿಸಿಕೊಂಡರು. ಇನ್ನೊಂದೆಡೆ ಮಹಿಳಾ ವಿಭಾಗದಲ್ಲಿ ಭಾರತೀಯ ಜೋಡಿ ಜಕ್ಕಂಪುಡಿ ಮೇಘನಾ ಮತ್ತು ಪೂರ್ವಿಶಾ ಎಸ್.ರಾಮ್ ಜೋಡಿ ಇಂಡೋನೇಶ್ಯಾದ ಅಗತಾ ಇಮ್ಯಾನ್ಯುವೆಲಾ ಹಾಗೂ ಸಿತಿ ಫದಿಯ ಸಿಲ್ವ ರಮದಂಟಿ ವಿರುದ್ಧ 11-21, 18-21 ಅಂತರದಲ್ಲಿ ಸೋಲೊಪ್ಪಿಕೊಂಡು ಕ್ರೀಡಾಕೂಟದಿಂದ ನಿರ್ಗಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News