ಹುದ್ದೆ ತ್ಯಜಿಸಲು ಪೊಲೆಂಡ್ ಕೋಚ್ ನಿರ್ಧಾರ

Update: 2018-07-03 18:23 GMT

ವರ್ಸಾವ್, ಜು.3: ಈಗ ರಶ್ಯದಲ್ಲಿ ನಡೆಯುತ್ತಿರುವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪೊಲೆಂಡ್ ಗ್ರೂಪ್ ಹಂತದಲ್ಲೇ ಸೋಲುಂಡು ನಿರ್ಗಮಿಸಿರುವುದರಿಂದ ಹತಾಶೆಗೊಂಡಿರುವ ತಂಡದ ತರಬೇತುದಾರ ಆ್ಯಡಮ್ ನವಲ್ಕ ಜುಲೈ ತಿಂಗಳ ಕೊನೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೆಂಡ್ ಫುಟ್ಬಾಲ್ ಅಸೋಸಿಯೇಶನ್‌ನ ಮುಖ್ಯಸ್ಥ ಬಿಗ್ನಿವ್ ಬೋನಿಕ್, ‘‘ಜುಲೈ 30ರ ವರೆಗೆ ಪೊಲೆಂಡ್ ತಂಡದ ಕೋಚ್ ಆಗಿ ಆ್ಯಡಮ್ ನವಲ್ಕ ಅವರನ್ನು ಮುಂದುವರಿಸಲು ನಾವು ನಿರ್ಧರಿಸಿದ್ದೆವು. ಆನಂತರ ನಾವು ಹೊಸ ತರಬೇತುದಾರರನ್ನು ನೇಮಿಸುವ ಮೂಲಕ ಹೊಸ ರೀತಿಯಲ್ಲಿ ರಾಷ್ಟ್ರೀಯ ತಂಡವನ್ನು ಕಟ್ಟಲು ಪ್ರಯತ್ನಿಸುತ್ತೇವೆ’’ ಎಂದು ತಿಳಿಸಿದ್ದಾರೆ. ವಿಶ್ವಕಪ್ ಸೋಲಿಗೆ ಸಂಪೂರ್ಣ ಹೊಣೆ ಹೊತ್ತಿರುವ ನವಲ್ಕ, ‘‘ಖಂಡಿತವಾಗಿಯೂ ನಮ್ಮಿಂದ ತಪ್ಪಾಗಿದೆ. ನಾವು ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದೆವು. ನಾವು ನಮ್ಮ ಯೋಜನೆಗಳನ್ನು, ಆಕಾಂಕ್ಷೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಲಿಲ್ಲ. ನಮ್ಮ ಅಭಿಮಾನಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದೆವು. ಅದಕ್ಕೆಲ್ಲ ನಾನೇ ಹೊಣೆಯನ್ನು ಹೊರುತ್ತೇನೆ’’ ಎಂದು ತಿಳಿಸಿದ್ದಾರೆ. 60ರ ಹರೆಯದ ನವಲ್ಕ ಅವರ ಕೋಚ್ ಹುದ್ದೆಯ ಗುತ್ತಿಗೆಯು ವಿಶ್ವಕಪ್ ನಂತರ ಕೊನೆಯಾಗಿದೆ. ಇದೀಗ ಪೊಲೆಂಡ್ ಫುಟ್ಬಾಲ್ ಅಸೋಸಿಯೇಶನ್ ಈ ಗುತ್ತಿಗೆಯನ್ನು ವಿಸ್ತರಿಸದಿರಲು ನಿರ್ಧರಿಸಿದೆ. ವಿಶ್ವಕಪ್‌ನಲ್ಲಿ ಪೊಲೆಂಡ್ ತನ್ನ ಎರಡು ಆರಂಭಿಕ ಪಂದ್ಯಗಳಲ್ಲಿ ಸೋಲುಂಡಿತ್ತು ಮತ್ತು ನಾಕೌಟ್ ಹಂತದಿಂದ ಹೊರಗೆ ಬಿದ್ದ ಯೂರೋಪ್‌ನ ಮೊದಲ ತಂಡವಾಗಿತ್ತು. ಈ ಸೋಲಿನಿಂದ ನವಲ್ಕರ ತಂತ್ರಗಾರಿಕೆ ಮತ್ತು ಆಟಗಾರರ ಆಯ್ಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಮೂರನೇ ಪಂದ್ಯದಲ್ಲಿ ಪೊಲೆಂಡ್ ಜಪಾನ್ ವಿರುದ್ಧ ಗೆಲುವು ಸಾಧಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News