ಕತ್ತರಿಸಲ್ಪಟ್ಟ ಶಿಕ್ಷಕಿಯ ತಲೆಯೊಂದಿಗೆ 5 ಕಿ.ಮೀ. ಓಡಿದ!

Update: 2018-07-04 13:32 GMT

ಜಮಶೇದ್‌ಪುರ(ಜಾರ್ಖಂಡ್),ಜು.4: ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವ ಶಾಲಾಶಿಕ್ಷಕಿಯ ತಲೆಯನ್ನು ಕತ್ತರಿಸಿದ ಭೀಕರ ಘಟನೆ ಸೆರಾಯ್‌ಕೇಲಾ-ಖರ್ಸ್ವಾನ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಆರೋಪಿಯು ಬಂಧನಕ್ಕೆ ಮುನ್ನ ಕತ್ತರಿಸಿದ ತಲೆಯೊಂದಿಗೆ ಐದು ಕಿ.ಮೀ.ದೂರದ ಅರಣ್ಯದಲ್ಲಿ ಪರಾರಿಯಾಗಿದ್ದ.

ಖಪರ್ಸಾಯಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡುತ್ತಿದ್ದಾಗ ಈ ಘಟನೆ ನಡೆದಿದೆ. ಶಾಲೆಯ ಸಮೀಪವೇ ವಾಸವಿದ್ದ ಆರೋಪಿ ಹರಿ ಹೆಂಬ್ರಾಮ್(26) ಎಂಬಾತ ಶಾಲೆಯ ಆವರಣದೊಳಗೆ ನುಗ್ಗಿ ಶಿಕ್ಷಕಿ ಸುಕ್ರಾ ಹೆಸಾ(30) ಅವರನ್ನು ತನ್ನ ಮನೆಯತ್ತ ಎಳೆದೊಯ್ದು ಖಡ್ಗದಿಂದ ತಲೆಯನ್ನು ಕತ್ತರಿಸಿದ್ದಾನೆ ಎಂದು ಸೆರಾಯ್‌ಕೇಲಾ ಉಪವಿಭಾಗ ಪೊಲೀಸ್ ಅಧಿಕಾರಿ ಅವಿನಾಶ್ ಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಘಟನೆಯ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಾದರೂ ಹೆಂಬ್ರಾಮ್ ಕೈಗಳಲ್ಲಿ ಎರಡು ಖಡ್ಗಗಳಿದ್ದರಿಂದ ಆತನನ್ನು ಸಮೀಪಿಸಲು ಧೈರ್ಯ ಮಾಡಿರಲಿಲ್ಲ. ಆತನನ್ನು ಗುಂಡಿಕ್ಕಲು ಪೊಲೀಸರು ಯೋಚಿಸಿದ್ದರಾದರೂ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಅದು ಸಾಧ್ಯವಾಗಲಿಲ್ಲ ಎಂದರು.

ತಲೆಯನ್ನು ಹಿಡಿದುಕೊಂಡೇ ಆತ ಶಾಲೆಯಿಂದ ಸುಮಾರು ಐದು ಕಿ.ಮೀ.ದೂರದ ಹೆಸೆಲ್ ಗ್ರಾಮದ ಬಳಿಯ ಅರಣ್ಯಕ್ಕೆ ಪರಾರಿಯಾಗಿದ್ದು,ಆತನನ್ನು ಬೆನ್ನಟ್ಟಿದ ಪೊಲೀಸರು ಮತ್ತು ಸ್ಥಳೀಯರು ಪೊದೆಯೊಂದರಲ್ಲಿ ಅಡಗಿಕೊಂಡಿದ್ದವನನ್ನು ಹಿಡಿಯುವಲ್ಲಿ ಸಫಲರಾಗಿದ್ದಾರೆ. ಆರೋಪಿಯನ್ನು ಜನರು ಹಿಗ್ಗಾಮುಗ್ಗಾ ಥಳಿಸಿದ್ದು ಆತನನ್ನು ರಕ್ಷಿಸಲು ಪೊಲೀಸರು ಹೆಣಗಾಡುವಂತಾಗಿತ್ತು. ಈ ಗಲಾಟೆಯಲ್ಲಿ ಸರಾಯ್‌ಕೇಲಾ ಪೊಲೀಸ್ ಠಾಣಾಧಿಕಾರಿ ಸೇರಿದಂತೆ ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಆರೋಪಿಯನ್ನು ಇಲ್ಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News