ಪತ್ರಕರ್ತರ ಹತ್ಯೆ ಬಗ್ಗೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಆತಂಕ

Update: 2018-07-04 14:01 GMT

ಹೊಸದಿಲ್ಲಿ, ಜು.4: ಕಳೆದ ಹದಿನೆಂಟು ತಿಂಗಳಲ್ಲಿ ಏಳು ಪತ್ರಕರ್ತರ ಹತ್ಯೆ ಮತ್ತು ಆನ್‌ಲೈನ್‌ನಲ್ಲಿ ಅವಹೇಳನ ಮತ್ತು ಕಿರುಕುಳ ಘಟನೆಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಸದ್ಯ ಭಾರತದಲ್ಲಿನ ಪರಿಸ್ಥಿತಿಯ ಬಗ್ಗೆ ಮಾಧ್ಯಮ ಕಣ್ಗಾವಲು ಸಂಸ್ಥೆ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ (ಆರ್‌ಎಸ್‌ಎಫ್) ಬುಧವಾರ ಕಳವಳ ವ್ಯಕ್ತಪಡಿಸಿದೆ.

ತಮ್ಮ ಕೆಲಸಕ್ಕೆ ಸಂಬಂಧಿಸಿದಂತೆ 2017ರಲ್ಲಿ ಕನಿಷ್ಟ ಮೂವರು ಪತ್ರಕರ್ತರನ್ನು ಹತ್ಯೆ ಮಾಡಲಾಗಿತ್ತು. ನಾಲ್ಕನೇ ಪ್ರಕರಣದ ತನಿಖೆ ನಡೆಯುತ್ತಿದೆ. 2018ರ ಮೊದಲ ಆರು ತಿಂಗಳಲ್ಲೇ ನಾಲ್ಕು ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದರ ಜೊತೆಗೆ ಆನ್‌ಲೈನ್‌ನಲ್ಲಿ ಅವಹೇಳನ ಮತ್ತು ಕಿರುಕುಳ ನೀಡುವ ಘಟನೆಗಳಲ್ಲೂ ತೀವ್ರ ಏರಿಕೆಯಾಗಿದೆ ಎಂದು ಆರ್‌ಎಸ್‌ಎಫ್ ಮಾಧ್ಯಮ ಸ್ವಾತಂತ್ರವು ಕಳೆಗುಂದುತ್ತಿರುವ ಬಗ್ಗೆ ಎಚ್ಚರಿಸಲು ಸಿದ್ಧಪಡಿಸಿರುವ ಘಟನಾ ವರದಿ (ಇನ್ಸಿಡೆಂಟ್ ರಿಪೋರ್ಟ್) ಯಲ್ಲಿ ತಿಳಿಸಿದೆ.

ಭಾರತವು ವಿಶ್ವ ಮಾಧ್ಯಮ ಸ್ವಾತಂತ್ರ್ಯ ಸೂಚಿಯಲ್ಲಿರುವ 180 ದೇಶಗಳ ಪೈಕಿ 138ನೇ ಸ್ಥಾನದಲ್ಲಿದ್ದು ಪರಿಸ್ಥಿತಿ ಹೀಗೆ ಮುಂದುವರಿದರೆ ಮತ್ತಷ್ಟು ಕೆಳಮಟ್ಟಕ್ಕೆ ಕುಸಿಯುವ ಎಚ್ಚರಿಕೆಯನ್ನು ಸಂಸ್ಥೆ ನೀಡಿದೆ. ಕಾಶ್ಮೀರದಲ್ಲಿ ಆಂಗ್ಲ ಪತ್ರಿಕೆಯ ಸಂಪಾದಕರಾಗಿದ್ದ ಶುಜಾತ್ ಬುಖಾರಿ ಹತ್ಯೆಯು ಭಾರತದಲ್ಲಿ ನಡೆದ ಪತ್ರಕರ್ತರ ಹತ್ಯೆಗೆ ಇತ್ತೀಚಿನ ಸೇರ್ಪಡೆಯಾಗಿದೆ. ಬುಖಾರಿಯನ್ನು ಜೂನ್ 14ರಂದು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಪತ್ರಕರ್ತರ ರಕ್ಷಣೆಗಾಗಿ ರಚನೆಯಾಗಿರುವ ಅಮೆರಿಕ ಮೂಲದ ಸಮಿತಿಯ ಪ್ರಕಾರ, 1992ರಿಂದೀಚೆಗೆ ಭಾರತದಲ್ಲಿ 40ಕ್ಕೂ ಅಧಿಕ ಪತ್ರಕರ್ತರನ್ನು ಹತ್ಯೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News