ಸಿರಿಯ ನಿರಾಶ್ರಿತರಿಗೆ ಗಡಿ ತೆರೆಯಲು ಜೋರ್ಡಾನ್ ನಕಾರ

Update: 2018-07-04 15:08 GMT

 ಅಮ್ಮಾನ್, ಜು. ೪: ಸಿರಿಯದ ದರಾ ನಗರದಲ್ಲಿ ಸರಕಾರಿ ಸೇನೆ ನಡೆಸುತ್ತಿರುವ   ಬಾಂಬ್ ದಾಳಿಗಳಿಗೆ ಬೆದರಿ ಪಲಾಯನಗೈಯುತ್ತಿರುವ ಸುಮಾರು 1 ಲಕ್ಷ ನಿರಾಶ್ರಿತರಿಗೆ  ತನ್ನ ಗಡಿಯನ್ನು ತೆರೆಯಬೇಕೆಂಬ ಹೆಚ್ಚುತ್ತಿರುವ ಒತ್ತಡವನ್ನು ಜೋರ್ಡಾನ್ ಮಂಗಳವಾರ ತಿರಸ್ಕರಿಸಿದೆ.

ನಿರ್ವಸಿತರ ನಡುವೆ ಭಯೋತ್ಪಾದಕರೂ ಸೇರಿರಬಹುದು ಎಂಬ ಭೀತಿ ಅಧಿಕಾರಿಗಳಿಗಿದೆ ಎಂದು ‘ಅರಬ್ ನ್ಯೂಸ್’ ವರದಿ ಮಾಡಿದೆ.

‘‘ಭದ್ರತಾ ಪರಿಸ್ಥಿತಿ ಈಗಲೂ ಗಂಭೀರವಾಗಿದೆ ಹಾಗೂ ನಾವು ಯಾವುದೇ ಅಪಾಯವನ್ನು ಎದುರುಹಾಕಿಕೊಳ್ಳುವ ಸ್ಥಿತಿಯಲ್ಲಿಲ್ಲ’’ ಎಂದು ಜೋರ್ಡಾನ್ ಸರಕಾರಿ ವಕ್ತಾರೆಯೊಬ್ಬರು ಹೇಳಿದ್ದಾರೆ.

ಗಡಿಯ ಸಿರಿಯ ಬದಿಯಲ್ಲಿ ಐಸಿಸ್‌ಗೆ ಸೇರಿದ ಸೇನಾ ಉಪಕರಣಗಳು ಪತ್ತೆಯಾಗಿವೆ ಎಂದು ಅವರು ಹೇಳಿದರು. ‘‘ಸಿರಿಯದೊಂದಿಗಿನ ನಮ್ಮ ಗಡಿ ಸಮೀಪ ಯಾವುದೇ ಸ್ಥಳದಲ್ಲಿ ಶಸ್ತ್ರಧಾರಿ ಬಂಡುಕೋರರು ಇರಬಾರದು ಎಂಬ ನಮ್ಮ ಹಿಂದಿನ ಶರತ್ತುಗಳಿಗೆ ನಾವು ಬದ್ಧರಾಗಿದ್ದೇವೆ’’ ಎಂದರು.

ಜೋರ್ಡಾನ್ ಗಡಿಯಲ್ಲಿರುವ ದಕ್ಷಿಣ ದರಾ ಪ್ರಾಂತವನ್ನು ಮರುವಶಪಡಿಸಿಕೊಳ್ಳುವುದಕ್ಕಾಗಿ ಸಿರಿಯ ಸೇನೆಯು ರಶ್ಯದ ವಾಯು ದಾಳಿಯ ನೆರವಿನೊಂದಿಗೆ ಜೂನ್ ೧೯ರಂದು ಕಾರ್ಯಾಚರಣೆ ಆರಂಭಿಸಿದೆ.

ಸಿರಿಯ ಸೇನೆಯ ಕಾರ್ಯಾಚರಣೆಯಿಂದಾಗಿ 2,70,000 ಸಿರಿಯನ್ನರು ನಿರ್ವಸಿತರಾಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಅದೇ ವೇಳೆ, 95000 ಮಂದಿ ಗಡಿಯಲ್ಲಿ ಆಶ್ರಯ ಕೋರಿದ್ದಾರೆ ಎಂದು ಜೋರ್ಡಾನ್ ಅಂದಾಜಿಸಿದೆ.

ಗಡಿ ತೆರೆಯಲು ವಿಶ್ವಸಂಸ್ಥೆ ಮನವಿ

ತನ್ನ ಗಡಿಯನ್ನು ತೆರೆದಿಡುವಂತೆ ಜೋರ್ಡಾನ್ ಸರಕಾರಕ್ಕೆ ಹಾಗೂ ಪಲಾಯನಗೈಯುತ್ತಿರುವ ನಾಗರಿಕರನ್ನು ಸ್ವೀಕರಿಸುವಂತೆ ವಲಯದ ಇತರ ದೇಶಗಳಿಗೆ  ನಾವು ಕರೆ ನೀಡುತ್ತೇವೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗದ ವಕ್ತಾರ ಲಿಝ್ ತ್ರಾಸೆಲ್ ಹೇಳಿದ್ದಾರೆ.

ನಿರಾಶ್ರಿತರಿಗೆ ಮಾನವೀಯ ಸೇವೆ: ಜೋರ್ಡಾನ್

ತಾನು ಮಾನವೀಯ ಸೇವೆಯನ್ನು ಮಾಡುತ್ತಿರುವುದಾಗಿ ಜೋರ್ಡಾನ್ ಹೇಳಿದೆ.

ಕಳೆದ ಮೂರು ದಿನಗಳ ಅವಧಿಯಲ್ಲಿ ಸಿರಿಯ ನಿರ್ವಸಿತರಿಗೆ ಆಹಾರ ಮತ್ತು ನೀರು ನೀಡಲು ತನ್ನ 86 ಟ್ರಕ್‌ಗಳು ಸಿರಿಯ ಗಡಿ ದಾಟಿವೆ ಎಂದು ಜೋರ್ಡಾನ್ ಸೇನೆಯ ನಾರ್ದರ್ನ್ ಕಮಾಂಡರ್ ಜನರಲ್ ಖಾಲಿದ್ ಅಲ್-ಮಸೂದ್ ಹೇಳಿದ್ದಾರೆ.

ಗಡಿಯುದ್ದಕ್ಕೂ ಮೂರು ಸ್ಥಳಗಳಲ್ಲಿ ಜೋರ್ಡಾನ್ ಸೇನೆಯು ಮಾನವೀಯ ನೆರವು ವಿತರಿಸುತ್ತಿದೆ ಹಾಗೂ ವೈದ್ಯಕೀಯ ಚಿಕಿತ್ಸೆಯನ್ನು ನೀಡುತ್ತಿದೆ ಎಂದು ಅವರು ತಿಳಿಸಿದರು.

ಗಾಯಗೊಂಡವರಿಗಾಗಿ ಗಡಿಯ ಜೋರ್ಡಾನ್ ಭಾಗದಲ್ಲಿ ಜೋರ್ಡಾನ್ ಸೇನೆಯು 20 ಹಾಸಿಗೆಗಳ ಆಸ್ಪತ್ರೆಗಳನ್ನು ನಡೆಸುತ್ತಿದೆ.

‘‘ಕಳೆದ ಹಲವಾರು ದಿನಗಳಲ್ಲಿ ಸೇನೆಯು ೧೬ ವೈದ್ಯಕೀಯ ಪ್ರಕರಣಗಳನ್ನು ಗುರುತಿಸಿದೆ ಹಾಗೂ ರೋಗಿಗಳನ್ನು ರಮ್ತದಲ್ಲಿರುವ ಸ್ಥಳೀಯ ಆಸ್ಪತ್ರೆಗಳಿಗೆ ಸೇರಿಸಲಾಗಿತ್ತು. ನಾಲ್ಕು ರೋಗಿಗಳನ್ನು ಜೋರ್ಡಾನ್ ರಾಜಧಾನಿ ಅಮ್ಮಾನ್‌ನಲ್ಲಿರುವ ಪ್ರಮುಖ ಆಸ್ಪತ್ರೆಗಳಿಗೆ ಸೇರಿಸಲಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News