ವಸಾಹತು ವಿಸ್ತರಣೆ ನಿಲ್ಲಿಸಲು ಇಸ್ರೇಲ್‌ಗೆ ಕರೆ ನೀಡುವ ವಿಶ್ವಸಂಸ್ಥೆ ನಿರ್ಣಯ ಜಾರಿಗೊಳಿಸಿ: ಯುಎಇ ಒತ್ತಾಯ

Update: 2018-07-04 15:13 GMT

ಜಿನೇವ, ಜು. ೪: ಪೂರ್ವ ಜೆರುಸಲೇಮ್ ಸೇರಿದಂತೆ ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ವಸಾಹತು (ಮನೆ ನಿರ್ಮಾಣ) ವಿಸ್ತರಣೆಯನ್ನು ನಿಲ್ಲಿಸಬೇಕೆಂದು ಇಸ್ರೇಲ್‌ಗೆ ಕರೆ ನೀಡುವ ವಿಶ್ವಸಂಸ್ಥೆಯ ಎಲ್ಲ ನಿರ್ಣಯಗಳು ಜಾರಿಗೊಳ್ಳಬೇಕೆಂದು ಯುಎಇ ಒತ್ತಾಯಿಸಿದೆ.

ಇಸ್ರೇಲ್‌ನ ಅತಿಕ್ರಮಣವನ್ನು ಕೊನೆಗೊಳಿಸುವಂತೆ ಅದು ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದೆ. ಸ್ವನಿರ್ಣಯದ ಹಕ್ಕು ಮತ್ತು ಪೂರ್ವ ಜೆರುಸಲೇಮನ್ನು ರಾಜಧಾನಿಯಾಗಿಸಿ ಸ್ವತಂತ್ರ ಫೆಲೆಸ್ತೀನ್ ದೇಶ ನಿರ್ಮಾಣದ ಹಕ್ಕು ಸೇರಿದಂತೆ ಫೆಲೆಸ್ತೀನ್ ಜನರ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುವಂತೆಯೂ ಯುಎಇ ಒತ್ತಾಯಿಸಿದೆ.

ಜಿನೇವದಲ್ಲಿ ನಡೆದ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ೩೮ನೇ ಅಧಿವೇಶನದಲ್ಲಿ ಯುಎಇಯ ಖಾಯಂ ಪ್ರತಿನಿಧಿ ಉಬೈದ್ ಸಲೀಮ್ ಅಲ್ ಝಾಬಿ ಈ ಬೇಡಿಕೆಗಳನ್ನು ಮಂಡಿಸಿದರು.

ಫೆಲೆಸ್ತೀನ್ ಮತ್ತು ಇತರ ಆಕ್ರಮಿತ ಅರಬ್ ಭೂಮಿಗಳಲ್ಲಿ ನೆಲೆಸಿರುವ ಮಾನವಹಕ್ಕುಗಳ ಸ್ಥಿತಿಗತಿಯ ಬಗ್ಗೆ ಈ ಅಧಿವೇಶನದಲ್ಲಿ ಚರ್ಚೆ ನಡೆಯಿತು.

ಪೂರ್ವ ಜೆರುಸಲೇಮ್ ಸೇರಿದಂತೆ, ಆಕ್ರಮಿತ ಫೆಲೆಸ್ತೀನ್ ಪ್ರದೇಶಗಳಲ್ಲಿ ಇಸ್ರೇಲ್ 1967 ರಿಂದ ಅನುಸರಿಸಿಕೊಂಡು ಬರುತ್ತಿರುವ ವಸಾಹತು ವಿಸ್ತರಣೆ ನೀತಿಗೆ ಯಾವುದೇ ಕಾನೂನು ನೆಲೆಯಿಲ್ಲ ಹಾಗೂ ಅದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದಾಗಿ ೨೦೧೬ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿರುವ ಭದ್ರತಾ ಮಂಡಳಿ ನಿರ್ಣಯ ಸಂಖ್ಯೆ ೨೩೩೪ನ್ನು ಅವರು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News