ಮುಂಬೈನ ಇನ್ನೊಂದು ರೈಲ್ವೆ ಸೇತುವೆಯಲ್ಲಿ ಬಿರುಕು

Update: 2018-07-04 15:40 GMT
ಸಾಂದರ್ಭಿಕ ಚಿತ್ರ

ಮುಂಬೈ,ಜು.4: ಮಂಗಳವಾರ ಉಪನಗರ ಅಂಧೇರಿ ರೈಲ್ವೆನಿಲ್ದಾಣದಲ್ಲಿಯ ಪಾದಚಾರಿಗಳ ಮೇಲ್ಸೇತುವೆಯು ಭಾರೀಮಳೆಯಿಂದಾಗಿ ಕುಸಿದು ಬಿದ್ದ ಬೆನ್ನಲ್ಲೇ ಗ್ರಾಂಟ್ ರೋಡ್ ರೈಲ್ವೆ ನಿಲ್ದಾಣದ ಫ್ರೆರಿ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ. ಅಂಧೇರಿಯಲ್ಲಿ ಸಂಭವಿಸಿದ್ದ ಅವಘಡದಲ್ಲಿ ಐವರು ಗಾಯಗೊಂಡಿದ್ದು,ರೈಲು ಸೇವೆಗಳು ಅಸ್ತವ್ಯಸ್ತಗೊಂಡಿದ್ದವು. ಈ ಘಟನೆ ಮಹಾನಗರದಲ್ಲಿಯ ಕಳಪೆ ಮೂಲಸೌಕರ್ಯಗಳ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲಿದೆ.

ಫ್ರೆರಿ ಸೇತುವೆಯ ಸ್ಥಿತಿಯನ್ನು ಪರಿಶೀಲಿಸುವಂತೆ ಬೃಹನ್ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯ ಸೇತುವೆಗಳ ವಿಭಾಗಕ್ಕೆ ಮತ್ತು ಇತರ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಬಿಎಂಸಿಯ ಅಧಿಕಾರಿಯೋರ್ವರು ಬುಧವಾರ ತಿಳಿಸಿದರು.

 ಮುಂಬೈ ಮಹಾನಗರ ಮತ್ತು ಉಪನಗರಗಳಲ್ಲಿನ 274 ಸೇತುವೆಗಳ ಸುರಕ್ಷತಾ ಸ್ಥಿತಿಯ ಕುರಿತು ಪರಿಶೀಲನೆ ನಡೆಯುತ್ತಿದ್ದು,ದುರಸ್ತಿ,ನಿರ್ವಹಣೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಅಂತಿಮ ಕ್ರಿಯಾ ಯೋಜನೆಯನ್ನು ವಾರದೊಳಗೆ ಸಿದ್ಧಗೊಳಿಸಲಾಗುವುದು ಎಂದು ಬಿಎಂಸಿಯ ಮುಖ್ಯ ಇಂಜಿನಿಯರ್ (ಸೇತುವೆಗಳು)ಶೀತಲಪ್ರಸಾದ ಕೋರಿ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಮಂಗಳವಾರ ಅಂಧೇರಿಯಲ್ಲಿ ಕುಸಿದು ಬಿದ್ದ ಗೋಖಲೆ ಮೇಲ್ಸೇತುವೆಯನ್ನು ಬಿಎಂಸಿ ನಿರ್ಮಿಸಿದ್ದು,ಅದರ ಒಡೆತನವನ್ನು ಹೊಂದಿದೆ. ಆದರೆ ಅದರ ನಿರ್ವಹಣೆಯ ಹೊಣೆ ಪಶ್ಚಿಮ ರೈಲ್ವೆಯದಾಗಿತ್ತು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News