×
Ad

ಕೈದಿಯನ್ನು ಜೈಲಿನಿಂದ ಹೊರಗೆ ಬಿಟ್ಟು ಬೆಂಗಾವಲಿಗೆ ನಿಂತ ಪೊಲೀಸರು !

Update: 2018-07-04 21:55 IST

ಜೈಪುರ, ಜು.4: ಕೈದಿಯೊಬ್ಬನನ್ನು ಜೈಲಿನಿಂದ ಹೊರ ಬರಲು ಅವಕಾಶ ಮಾಡಿಕೊಟ್ಟು ಜೈಲಿನ ಹೊರಗೆ ತಿರುಗಾಡಲು ಬಿಟ್ಟ ಹಾಗೂ ಜೈಲಿನ ಸಿಬ್ಬಂದಿಯೇ ಆತನ ಬೆಂಗಾವಲಿಗಿದ್ದ ಘಟನೆ ರಾಜಸ್ತಾನದ ಅಲ್ವಾರ್ ಸೆಂಟ್ರಲ್ ಜೈಲಿನಲ್ಲಿ ನಡೆದಿದೆ. ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.

 ಬಹುಕೋಟಿ ಮೊತ್ತದ ಪೋಂಝಿ ಹಗರಣ(ಹೂಡಿಕೆದಾರರಿಗೆ ವಂಚಿಸಿದ ಪ್ರಕರಣ)ದಲ್ಲಿ ಆರೋಪಿಯಾಗಿರುವ ದಿಲೀಪ್ ವರ್ಮ ಎಂಬಾತ ಕಪ್ಪುಬಣ್ಣದ ಬ್ಯಾಗೊಂದನ್ನು ಹಿಡಿದುಕೊಂಡು ರಾತ್ರಿ ವೇಳೆ ಜೈಲಿನಿಂದ ಹೊರಗೆ ಬರುತ್ತಿರುವ ಹಾಗೂ ಈತನ ಬೆಂಗಾವಲಿನಲ್ಲಿ ಕೆಲವು ಕಾನ್‌ಸ್ಟೇಬಲ್‌ಗಳೂ ಹಿಂಬಾಲಿಸುತ್ತಿರುವ ಘಟನೆಯ ವೀಡಿಯೊ ದೃಶ್ಯ ಪ್ರಸಾರವಾಗಿದೆ.

 ಜೈಲಿನ ಸಿಬ್ಬಂದಿ ಹಾಗೂ ಕೈದಿಗಳ ಮಧ್ಯೆ ಘರ್ಷಣೆ ಸಂಭವಿಸಿದ ಬಗ್ಗೆ ಅಲ್ವಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಈ ದೂರಿನ ವಿಚಾರಣೆ ನಡೆಸುತ್ತಿದ್ದಾಗ ವೀಡಿಯೊ ದೃಶ್ಯಾವಳಿಯ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ. ದಿಲೀಪ್ ವರ್ಮ ಜೈಲಿನ ಸಿಬ್ಬಂದಿಯನ್ನು ನಿಯಂತ್ರಿಸುತ್ತಿದ್ದು ಇದು ಅಹಿತಕರ ಘಟನೆಗೆ ಕಾರಣವಾಗಬಹುದು ಎಂದು ಪೊಲೀಸ್ ಲೈನ್‌ನ ಉಸ್ತುವಾರಿ ಅಧಿಕಾರಿ ದೂರು ಸಲ್ಲಿಸಿರುವುದಾಗಿ ಅಲ್ವಾರ್ ಪೊಲೀಸ್ ಅಧೀಕ್ಷಕ ರಾಹುಲ್ ಪ್ರಕಾಶ್ ತಿಳಿಸಿದ್ದಾರೆ.

ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳು ತನಿಖೆ ನಡೆಸಲಿದ್ದು ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News