×
Ad

ಸುಪ್ರೀಂ ಕೋರ್ಟ್ ತೀರ್ಪು ನಂತರ ಆಪ್ ಸರಕಾರದ ಮೊದಲ ಆದೇಶ ತಿರಸ್ಕೃತ !

Update: 2018-07-05 13:14 IST

ಹೊಸದಿಲ್ಲಿ, ಜು. 5: ಆಡಳಿತಾತ್ಮಕ ವಿಚಾರಗಳಲ್ಲಿ ದಿಲ್ಲಿಯ ಚುನಾಯಿತ ಸರಕಾರಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರಿಗಿಂತ ಹೆಚ್ಚಿನ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದ ಕೆಲವೇ ಗಂಟೆಗಳಲ್ಲಿ ಸರಕಾರ ಅಧಿಕಾರಿಗಳ ವರ್ಗಾವಣೆಯ ಅಧಿಕಾರವನ್ನು ವಾಪಸ್‌ಪಡೆಯಲು ಕೋರಿಕೆ ಸಲ್ಲಿಸಿದರೂ ಸರ್ವಿಸಸ್ ಇಲಾಖೆ ಅದನ್ನು ನಿರಾಕರಿಸಿ ಈ ಪ್ರಮುಖ ಇಲಾಖೆ ಇನ್ನೂ ಲೆಫ್ಟಿನೆಂಟ್ ಗವರ್ನರ್ ಅವರ ಸುಪರ್ದಿಯಲ್ಲಿಯೇ ಇದೆ ಎಂದು ತಿಳಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ನ್ಯಾಯಾಂಗ ನಿಂದನೆಗೈದಿದ್ದಾರೆಂದು ಆರೋಪಿಸಿ ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ಎಎಪಿ ಎಚ್ಚರಿಸಿದೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ಭೂಮಿ, ಪೊಲೀಸ್ ಹಾಗೂ ಸಾರ್ವಜನಿಕ ಸುವ್ಯವಸ್ಥೆಯ ಇಲಾಖೆಗಳು ಮಾತ್ರ ಕೇಂದ್ರದ ಸುಪರ್ದಿಯಲ್ಲಿ ಬರುತ್ತದೆ. ಈ ಆದೇಶದ ನಂತರ ಲೆಫ್ಟಿನೆಂಟ್ ಗವರ್ನರ್ ವರ್ಗಾವಣೆ ಹಾಗೂ ನೇಮಕಾತಿ ಆದೇಶಗಳಿಗೆ ಸಹಿ ಹಾಕುವಂತಿಲ್ಲ ಎಂದು ಮೂಲವೊಂದು ಹೇಳಿದೆ.

ಇನ್ನು ಮುಂದೆ ಮುಖ್ಯಮಂತ್ರಿಗೆ ಮಾತ್ರ ಅಧಿಕಾರಿಗಳನ್ನು ವರ್ಗಾಯಿಸುವ ಅಧಿಕಾರವಿದೆಯೆಂದು ಉಪಮುಖ್ಯಮಂತಿ ಮನೀಶ್ ಸಿಸೋಡಿಯಾ ಹೇಳಿದರೂ ಹೊಸ ಆದೇಶ ‘ಕಾನೂನಾತ್ಮಕವಾಗಿ ಸರಿಯಿಲ್ಲ’’ವಾದುದರಿಂದ ಅದನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಎಎಪಿ ಸರಕಾರ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ, ಅಂದರೆ ಮೇ 2015ರಂದು ಅಧಿಕಾರಿಗಳನ್ನು ವರ್ಗಾವಣೆ, ನೇಮಕಗೊಳಿಸುವ ಅಧಿಕಾರ ಲೆಫ್ಟಿನೆಂಟ್ ಗವರ್ನರ್ ಅವರಿಗೆ ವಹಿಸಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯೊಂದನ್ನು ಸುಪ್ರೀಂ ಕೋರ್ಟ್ ಇನ್ನಷ್ಟೇ ರದ್ದುಗೊಳಿಸಬೇಕಿದೆ. ಆದುದರಿಂದ ಕೇವಲ ಕೆಳ ಹಂತದ ಸಿಬ್ಬಂದಿಯನ್ನು ಮಾತ್ರ ದಿಲ್ಲಿ ಸರಕಾರ ಈಗ ವರ್ಗಾಯಿಸಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ ಹೊರತಾಗಿಯೂ ಎಎಪಿ ಸರಕಾರದ ಪರಿಸ್ಥಿತಿ ಹಿಂದಿಗಿಂತ ಭಿನ್ನವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News