2016ರಿಂದ ದೇಶದಲ್ಲಿ ನಡೆದ ಶೇ.95ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಮುಸ್ಲಿಮರು ಕಾರಣವೇ?

Update: 2018-07-05 12:49 GMT

ದೇಶದಲ್ಲಿ ನಡೆದಿರುವ ಹೆಚ್ಚಿನ ಅತ್ಯಾಚಾರ ಪ್ರಕರಣಗಳಲ್ಲಿ ಮುಸ್ಲಿಮರು ಆರೋಪಿಗಳಾಗಿದ್ದಾರೆ ಹಾಗೂ ಹೆಚ್ಚಿನ ಸಂತ್ರಸ್ತರು ಮುಸ್ಲಿಮೇತರ ಮಹಿಳೆಯರು ಎಂದು ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋದ 2016ರ ವರದಿ ಹೇಳುತ್ತದೆಯೆಂಬ ಅರ್ಥ ನೀಡುವ ಸಂದೇಶವೊಂದು ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ಹರಿದಾಡುತ್ತಿದೆ.

"ಎನ್‍ಸಿಆರ್ ಬಿ ವರದಿ: ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ದೇಶ: ಶೇ.95ರಷ್ಟು ಅತ್ಯಾಚಾರ ಪ್ರಕರಣಗಳಿಗೆ ಮುಸ್ಲಿಮರು ಕಾರಣ. ಒಟ್ಟು 84,734 ಅತ್ಯಾಚಾರ ಪ್ರಕರಣಗಳ ಪೈಕಿ 81,000 ಪ್ರಕರಣಗಳಲ್ಲಿ ಮುಸ್ಲಿಮರು ಅತ್ಯಾಚಾರಿಗಳಾಗಿದ್ದರೆ, ಶೇ.96ರಷ್ಟು ಸಂತ್ರಸ್ತೆಯರು ಮುಸ್ಲಿಮೇತರರು. ಅವರ ಜನಸಂಖ್ಯೆಯ ಹೆಚ್ಚಳದಿಂದ ಅತ್ಯಾಚಾರ ಸಂಖ್ಯೆಯೂ ಹೆಚ್ಚಾಗುತ್ತದೆ'' ಎಂದು ಈ ಸಂದೇಶ ಹೇಳುತ್ತದೆ.

ನಕಲಿ ಸುದ್ದಿ ಹರಡುವುದರಲ್ಲೇ ಕುಖ್ಯಾತಿ ಗಳಿಸಿರುವ 'ಪೋಸ್ಟ್ ಕಾರ್ಡ್ ನ್ಯೂಸ್' ಸ್ಥಾಪಕ ಮಹೇಶ್ ವಿಕ್ರಮ್ ಹೆಗ್ಡೆ ಕೂಡ ಈ ಸಂದೇಶವನ್ನು ಜುಲೈ 3ರಂದು ಶೇರ್ ಮಾಡಿದ್ದಾನೆ. ಅದನ್ನು 1,200ಕ್ಕೂ ಹೆಚ್ಚು ಬಾರಿ ಟ್ವೀಟ್ ಮಾಡಲಾಗಿದೆ. ಹೆಗ್ಡೆಯನ್ನು ಪ್ರಧಾನಿ ಮೋದಿ ಕೂಡ ಫಾಲೋ ಮಾಡುತ್ತಿದ್ದಾರೆ.

ಮುಸ್ಲಿಮರು ಲೈಂಗಿಕ ಶೋಷಕರು ಎಂಬಂತೆ ಬಿಂಬಿಸುವ ಯತ್ನ ಈ ಸಂದೇಶದ ಮೂಲಕ ಪಸರಿಸಿ ಭಯದ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂಬುದು ಸ್ಪಷ್ಟ. ವಾಸ್ತವವಾಗಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ ಅತ್ಯಾಚಾರ ಪ್ರಕರಣವನ್ನು ದಾಖಲಿಸುವಾಗ ಸಂತ್ರಸ್ತರ  ವಯಸ್ಸು ಮತ್ತು ಅಪರಾಧಿಗಳಿಗೂ ಸಂತ್ರಸ್ತರಿಗೂ ಇರುವ ಸಂಬಂಧಗಳ ಬಗ್ಗೆ ಉಲ್ಲೇಖಿಸುತ್ತದೆ. ಅಲ್ಲಿ ಸಂತ್ರಸ್ತೆಯರ ಯಾ ಆರೋಪಿಗಳ ಧರ್ಮದ ಬಗ್ಗೆ ಉಲ್ಲೇಖವೇ ಇಲ್ಲ.

ಈ ಬಗ್ಗೆ ಆಲ್ಟ್ ನ್ಯೂಸ್ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋವನ್ನು ಸಂಪರ್ಕಿಸಿದಾಗ, "ನಮ್ಮ ಸಂಸ್ಥೆ ಆರೋಪಿಗಳ ಯಾ ಸಂತ್ರಸ್ತೆಯರ ಧರ್ಮದ ಬಗ್ಗೆ ಮಾಹಿತಿ ಸಂಗ್ರಹಿಸುವುದಿಲ್ಲ. ತಪ್ಪು ಉದ್ದೇಶಗಳಿಗಾಗಿ ಇಂತಹ ಸುದ್ದಿಗಳನ್ನು ಹರಿಯ ಬಿಡಲಾಗುತ್ತಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News