ಭಾರತದ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಮೊಟ್ಟಮೊದಲ ಸುರಕ್ಷತಾ ಪರೀಕ್ಷೆ ನಡೆಸಿದ ಇಸ್ರೋ
ಚೆನ್ನೈ, ಜು.5: ಬಾಹ್ಯಾಕಾಶಕ್ಕೆ ಮಾನವಸಹಿತ ನೌಕೆಯನ್ನು ಕಳುಹಿಸುವ ತನ್ನ ಯೋಜನೆಯ ಭಾಗವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಡೆಸುವ ಸಿಬ್ಬಂದಿ ಪಾರಾಗುವ ವ್ಯವಸ್ಥೆ ಪರೀಕ್ಷೆಗಳ ಸರಣಿಯಲ್ಲಿ ಗುರುವಾರ ಮೊಟ್ಟಮೊದಲ ಪರೀಕ್ಷೆಯನ್ನು ನಡೆಸಲಾಯಿತು.
ಮಾನವ ಬಾಹ್ಯಾಕಾಶಯಾನಕ್ಕೆ ಸಿಬ್ಬಂದಿ ಪಾರಾಗುವ ವ್ಯವಸ್ಥೆ ಒಂದು ಅತ್ಯಂತ ಪ್ರಮುಖವಾದ ತಂತ್ರಜ್ಞಾನವಾಗಿದೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ. ನೌಕೆಯನ್ನು ಬಾಹ್ಯಾಕಾಶಕ್ಕೆ ಹಾರಿಸುವ ಸಂದರ್ಭ ಯೋಜನೆಯನ್ನು ತುರ್ತು ಸ್ಥಿತಿಯಲ್ಲಿ ನಿಲ್ಲಿಸಬೇಕಾಗಿ ಬಂದರೆ ಅಂಥ ಸಂದರ್ಭದಲ್ಲಿ ಬಾಹ್ಯಾಕಾಶಯಾನಿಯ ಸಹಿತ ಸಿಬ್ಬಂದಿ ಇರುವ ಕೋಶವನ್ನು ತಕ್ಷಣ ಹೊರಗೆಳೆಯುವಂಥ ತುರ್ತು ವಿಮೋಚನಾ ಕ್ರಮಗಳನ್ನು ರೂಪಿಸಲಾಗುತ್ತಿದೆ. ಇದನ್ನು ಸಿಬ್ಬಂದಿ ವಿಮೋಚನಾ ಅಥವಾ ಪಾರಾಗುವ ವ್ಯವಸ್ಥೆ ಎಂದು ಹೆಸರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಮೊದಲ ಪರೀಕ್ಷೆಯಲ್ಲಿ ಲಾಂಚ್ ಪ್ಯಾಡ್‌ನಲ್ಲಿ ನಡೆಯುವ ಯಾವುದೇ ತುರ್ತುಸ್ಥಿತಿಯಲ್ಲಿ ಸಿಬ್ಬಂದಿ ಕೋಶವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದನ್ನು ಪ್ರದರ್ಶಿಸಲಾಯಿತು ಎಂದು ಇಸ್ರೋ ತಿಳಿಸಿದೆ.
ಇಸ್ರೋ ನಡೆಸಿದ ಪರೀಕ್ಷೆಯಲ್ಲಿ 12.6 ಟನ್ ತೂಗುವ ಸಿಬ್ಬಂದಿ ಕೋಶವನ್ನು ಸಿಬ್ಬಂದಿ ವಿಮೋಚನಾ ವ್ಯವಸ್ಥೆಯ ಜೊತೆಗೆ ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮುಂಜಾನೆ ಏಳು ಗಂಟೆಗೆ ಹಾರಿ ಬಿಡಲಾಯಿತು. ಕ್ಷಣ ಮಾತ್ರದಲ್ಲಿ ಗಗನಕ್ಕೆ ಚಿಮ್ಮಿದ ಸಿಬ್ಬಂದಿ ಕೋಶವು ಕೆಲವೇ ಸೆಕೆಂಡ್‌ಗಳಲ್ಲಿ ಭೂಮಿಗೆ ಮರುಮುಖಮಾಡಿ ಬಂಗಾಳಕೊಲ್ಲಿಯಲ್ಲಿ ಬಿದ್ದು ಅದರಲ್ಲಿ ಅಳವಡಿಸಲಾಗಿದ್ದು, ಪ್ಯಾರಶೂಟ್‌ನ ಸಹಾಯದಿಂದ ನೀರಿನ ಮೇಲೆ ತೇಲುತ್ತಿತ್ತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ವಿದ್ಯಾಮಾನದ ವಿವಿಧ ನಿರ್ವಹಣಾ ಮೌಲ್ಯಮಾಪನವನ್ನು ಕನಿಷ್ಟ ಮುನ್ನೂರು ಸೆನ್ಸರ್‌ಗಳು ವಿವಿಧ ರೀತಿಯಲ್ಲಿ ದಾಖಲಿಸಿದವು. ನೀರಿನ ಮೇಲೆ ಬೀಳುವ ಸಿಬ್ಬಂದಿ ಕೋಶವನ್ನು ಸುರಕ್ಷಿತವಾಗಿ ತರಲು ಮೂರು ಬೋಟ್‌ಗಳನ್ನು ಬಂಗಾಳ ಕೊಲ್ಲಿಯಲ್ಲಿ ನಿಯೋಜಿಸಲಾಗಿತ್ತು.