ಉಮರ್ ಖಾಲಿದ್, ಕನ್ಹಯ್ಯಾರಿಗೆ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿದ ಜೆಎನ್‍ಯು ಸಮಿತಿ
ಹೊಸದಿಲ್ಲಿ, ಜು.5: ಉಗ್ರ ಅಫ್ಝಲ್ ಗುರು ಗಲ್ಲು ಶಿಕ್ಷೆಯ ವಿರುದ್ಧ ಫೆಬ್ರವರಿ 2016ರಲ್ಲಿ ಜೆಎನ್ ಯು ಕ್ಯಾಂಪಸ್ಸಿನಲ್ಲಿ ನಡೆದ ಕಾರ್ಯಕ್ರಮವೊಂದರ ಸಂಬಂಧ ವಿಶ್ವವಿದ್ಯಾಲಯ ನಡೆಸಿದ ಉನ್ನತ ಮಟ್ಟದ ತನಿಖೆಯೊಂದು ಉಮರ್ ಖಾಲಿದ್ ಉಚ್ಚಾಟನೆಯನ್ನು ಎತ್ತಿ ಹಿಡಿದಿದೆಯಲ್ಲದೆ, ಕನ್ಹಯ್ಯಾರಿಗೆ 10,000 ರೂ. ದಂಡ ವಿಧಿಸಿದೆ. ತನಿಖಾ ತಂಡದಲ್ಲಿ ಐದು ಮಂದಿ ಸದಸ್ಯರಿದ್ದರು.
ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು ದೇಶವಿರೋಧಿ ಘೋಷಣೆಗಳನ್ನು ಕೂಗಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಕನ್ಹಯ್ಯಾ, ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಾಗುತ್ತಿದ್ದಂತೆಯೇ ಈ ವಿಚಾರ ದೇಶಾದ್ಯಂತ ಕೋಲಾಹಲವೆಬ್ಬಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
2016ರಲ್ಲಿಯೇ ಜೆಎನ್ ಯು ಸಮಿತಿಯೊಂದು ಖಾಲಿದ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳ ಉಚ್ಚಾಟನೆ ಹಾಗೂ ಆಗಿನ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ ಕನ್ಹಯ್ಯಾ ಸಹಿತ 13 ವಿದ್ಯಾರ್ಥಿಗಳಿಗೆ ಅಶಿಸ್ತು ತೋರಿದ್ದಕ್ಕಾಗಿ ದಂಡ ವಿಧಿಸುವ ಶಿಫಾರಸು ಮಾಡಿತ್ತಾದರೂ ವಿದ್ಯಾರ್ಥಿಗಳು ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಜೆಎನ್‍ಯು ಸಮಿತಿಯ ನಿರ್ಧಾರವನ್ನು ಪರಿಶೀಲಿಸಲು ಅದನ್ನು ಮೇಲ್ಮನವಿ ಪ್ರಾಧಿಕಾರದ ಮುಂದಿಡಬೇಕೆಂದೂ ವಿವಿಗೆ ನ್ಯಾಯಾಲಯ ಹೇಳಿತ್ತು.