ಲೆ. ಗವರ್ನರ್ ಭೇಟಿಯಾಗಲು ಸಮಯ ಕೇಳಿದ ಅರವಿಂದ್ ಕೇಜ್ರಿವಾಲ್

Update: 2018-07-05 14:10 GMT

ಹೊಸದಿಲ್ಲಿ, ಜು.5: ದಿಲ್ಲಿ ಆಡಳಿತಾತ್ಮಕ ಮುಖ್ಯಸ್ಥ ಯಾರು ಎಂಬ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ತೀರ್ಪಿನಿಂದ ಉಂಟಾಗಿರುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ಲೆ.ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿಯಾಗಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಸಮಯ ಕೇಳಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹೊರತಾಗಿಯೂ ದಿಲ್ಲಿ ಸರಕಾರದಲ್ಲಿ ನಿಯೋಜನೆಗೊಂಡಿರುವ ಐಎಎಸ್ ಅಧಿಕಾರಿಗಳು ಸರಕಾರದ ಆದೇಶವನ್ನು ಪಾಲಿಸಲು ನಿರಾಕರಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಹೇಳಿಕೆ ನೀಡಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.

ಶ್ರೇಷ್ಠ ನ್ಯಾಯಾಲಯದ ಆದೇಶವನ್ನು ಅನುಷ್ಠಾನಕ್ಕೆ ತರಲು ಮತ್ತು ದಿಲ್ಲಿಯ ಅಭಿವೃದ್ಧಿಗಾಗಿ ಬೆಂಬಲ ಮತ್ತು ಸಹಕಾರವನ್ನು ಕೋರಲು ಲೆ.ಗವರ್ನರ್ ಅವರನ್ನು ಭೇಟಿಯಾಗಲು ಸಮಯ ಕೇಳಿದ್ದೇನೆ ಎಂದು ಕೇಜ್ರಿವಾಲ್ ಗುರುವಾರ ಟ್ವೀಟ್ ಮಾಡಿದ್ದಾರೆ. ಶ್ರೇಷ್ಠ ನ್ಯಾಯಾಲಯದ ಆದೇಶದ ಹೊರತಾಗಿಯೂ ದಿಲ್ಲಿಯ ಚುನಾಯಿತ ಸರಕಾರದ ಆದೇಶವನ್ನು ಪಾಲಿಸದಂತೆ ಅಧಿಕಾರಿಗಳನ್ನು ಕೇಂದ್ರ ಮತ್ತು ಲೆ.ಗವರ್ನರ್ ಪ್ರಚೋದಿಸುತ್ತಿದ್ದಾರೆ. ಕೇಂದ್ರವು ದಿಲ್ಲಿ ಸರಕಾರಕ್ಕೆ ಕಿರುಕುಳ ನೀಡುವುದನ್ನು ನಿಲ್ಲಿಸುವುದಿಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ದಿಲ್ಲಿ ಸಂಪುಟ ಸಚಿವ ಮತ್ತು ಆಪ್ ನಾಯಕ ಗೋಪಾಲ್ ರಾಯ್ ಟ್ವೀಟ್ ಮಾಡುವ ಮೂಲಕ ಲೆ.ಗ ಮತ್ತು ಕೇಂದ್ರದ ವಿರುದ್ಧದ ಸಮರವನ್ನು ಆಪ್ ಮುಂದುವರಿಸಿದೆ. 585 ಪುಟಗಳ ತನ್ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯ ಚುನಾಯಿತ ಸರಕಾರಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದರೂ ಅದರಲ್ಲಿ ಸೇವೆ ಅಥವಾ ಇನ್ಯಾವುದೇ ಇಲಾಖೆಯನ್ನು ನಿರ್ದಿಷ್ಟವಾಗಿ ಹೆಸರಿಸಲಾಗಿಲ್ಲ. ಆಮ್ ಆದ್ಮಿ ಪಕ್ಷದ ಪ್ರಕಾರ, ಜಮೀನು, ಪೊಲೀಸ್ ಮತ್ತು ಸಾರ್ವಜನಿಕ ಸುವ್ಯವಸ್ಥೆ ಈ ಮೂರು ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲ ವಿಷಯಗಳು ರಾಜ್ಯ ಸರಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಬುಧವಾರದಂದು ಸಿಸೋಡಿಯಾಗೆ ಬರೆದಿರುವ ಪತ್ರದಲ್ಲಿ, ಈ ಆದೇಶವು ಸೇವಾ ಇಲಾಖೆಯನ್ನು ದಿಲ್ಲಿ ಸರಕಾರದ ವ್ಯಾಪ್ತಿಯಿಂದ ಹೊರಗಿಟ್ಟಿರುವ 2015ರ ಅಧಿಸೂಚನೆಯನ್ನು ರದ್ದು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News