×
Ad

1984ರ ಸಿಖ್ ವಿರೋಧಿ ದಂಗೆ: ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಪ್ರತಿಕ್ರಿಯೆ ಕೇಳಿದ ನ್ಯಾಯಾಲಯ

Update: 2018-07-05 19:44 IST

ಹೊಸದಿಲ್ಲಿ, ಜು.5: 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್‌ಗೆ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿರುವ ನಿರೀಕ್ಷಣಾ ಜಾಮೀನನ್ನು ಪ್ರಶ್ನಿಸಿ ವಿಶೇಷ ತನಿಖಾ ತಂಡ (ಸಿಟ್) ಸಲ್ಲಿಸಿರುವ ಮೇಲ್ಮನವಿಗೆ ಪ್ರತಿಕ್ರಿಯೆ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಗುರುವಾರ ಕಾಂಗ್ರೆಸ್ ನಾಯಕನಿಗೆ ಸೂಚಿಸಿದೆ.

ಸಿಟ್ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎ.ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ನೇತೃತ್ವದ ನ್ಯಾಯಾಲಯ ಪೀಠ, ಇಂಥ ಪ್ರಕರಣಗಳ ವಿಚಾರಣೆಯನ್ನು ತುರ್ತಾಗಿ ನಡೆಸಲು ಇದು ಸಕಾಲ ಎಂದು ತಿಳಿಸಿದೆ. ಇದೊಂದು ಮೂವತ್ತು ವರ್ಷ ಹಳೆಯ ಪ್ರಕರಣವಾಗಿದ್ದು, ನಿರೀಕ್ಷಣಾ ಜಾಮೀನು ನೀಡಲು ಉಚ್ಚ ನ್ಯಾಯಾಲಯಕ್ಕೆ 200 ಪುಟಗಳು ಬೇಕಾದವು. ಆದರೆ ಅದನ್ನು ಕೇವಲ 40-50 ಪುಟಗಳಲ್ಲೇ ಮಾಡಿ ಮುಗಿಸಬಹುದಾಗಿತ್ತು ಎಂದು ಪೀಠ ತಿಳಿಸಿದೆ. ಸಿಟ್ ಪರ ವಾದಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಮನಿಂದರ್ ಸಿಂಗ್, ಸಜ್ಜನ್ ಕುಮಾರ್ ವಿರುದ್ಧ ತನಿಖೆಯು 2016ರಲ್ಲಿ ಆರಂಭಗೊಂಡಿತ್ತು ಮತ್ತೀಗ ಅವರು ವಕೀಲರ ದೊಡ್ಡ ಪಡೆಯ ಜೊತೆ ಬರುತ್ತಾರೆ ಮತ್ತು ಪ್ರಕರಣದ ತನಿಖಾಧಿಕಾರಿಗಳಿಗೆ ತಮ್ಮ ಹೇಳಿಕೆಯನ್ನು ಒಪ್ಪಿಸುತ್ತಾರೆ ಎಂದು ತಿಳಿಸಿದ್ದಾರೆ. ಎಲ್ಲವನ್ನೂ ಪ್ರಕರಣದ ವಿಚಾರಣೆಯ ವೇಳೆ ಪರೀಕ್ಷಿಸಲಾಗುವುದು ಎಂದ ಉಚ್ಚ ನ್ಯಾಯಾಲಯ ತಿಳಿಸಿತ್ತು. ಆದರೆ ನಂತರ ಕುಮಾರ್ ವಿರುದ್ಧ ಯಾವುದೇ ಸಾಕ್ಷಿ ದೊರೆತಿಲ್ಲ ಎಂದು ತೀರ್ಪಿತ್ತು ಅವರಿಗೆ ನಿರೀಕ್ಷಣಾ ಜಾಮೀನು ನೀಡಿತ್ತು ಎಂದು ಸಿಂಗ್ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹತ್ಯೆಯ ನಂತರ ಭುಗಿಲೆದ್ದ ದಂಗೆಯ ಸಮಯದಲ್ಲಿ ಮೂವರು ಸಿಖ್ಖರ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ಡಿಸೆಂಬರ್ 21ರಂದು ವಿಚಾರಣಾ ನ್ಯಾಯಾಲಯವು ಸಜ್ಜನ್ ಕುಮಾರ್‌ಗೆ ನಿರೀಕ್ಷಣಾ ಜಾಮೀನು ನೀಡಿತ್ತು. ಈ ಆದೇಶವನ್ನು ನಂತರ ದಿಲ್ಲಿ ಉಚ್ಚ ನ್ಯಾಯಲಯ ಎತ್ತಿ ಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News