ಸಿರಿಯ ಪ್ರತಿಪಕ್ಷಗಳೊಂದಿಗಿನ ಮಾತುಕತೆ ವಿಫಲ : ದರಾ ಪ್ರಾಂತದ ಮೇಲೆ ಭೀಕರ ಬಾಂಬ್ ದಾಳಿ ಆರಂಭಿಸಿದ ರಶ್ಯ

Update: 2018-07-05 14:25 GMT

ಅಮ್ಮಾನ್ (ಜೋರ್ಡಾನ್), ಜು. 5: ಸಿರಿಯ ಅಧ್ಯಕ್ಷ ಅಸ್ಸಾದ್ ಆಡಳಿತವನ್ನು ಮರುಸ್ಥಾಪಿಸುವುದಕ್ಕೆ ಸಂಬಂಧಿಸಿ ಪ್ರತಿಪಕ್ಷದೊಂದಿಗೆ ರಶ್ಯ ನಡೆಸಿರುವ ಸಂಧಾನ ವಿಫಲಗೊಂಡ ಬಳಿಕ, ದಕ್ಷಿಣ ಸಿರಿಯದ ದರಾ ಪ್ರಾಂತದ ಮೇಲೆ ರಶ್ಯ ಬುಧವಾರ ಭೀಕರ ವಾಯುದಾಳಿಗಳನ್ನು ನಡೆಸಿದೆ.

ಇದು ಈ ವಲಯದಲ್ಲಿ ನಾಲ್ಕು ದಿನಗಳಲ್ಲಿ ರಶ್ಯ ನಡೆಸಿದ ಮೊದಲ ವಾಯುದಾಳಿಯಾಗಿದೆ.

ಪ್ರಾಂತೀಯ ರಾಜಧಾನಿ ದರಾದ ವಾಯುವ್ಯದಲ್ಲಿರುವ ತಫಾಸ್ ಮತ್ತು ಪೂರ್ವದಲ್ಲಿರುವ ಸೈದಾ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ.

ಸೈದಾ ನಗರದ ಮೇಲೆ ಬ್ಯಾರಲ್ ಬಾಂಬ್‌ಗಳನ್ನೂ ಹಾಕಲಾಗಿದೆ.

 ‘ಫ್ರೀ ಸಿರಿಯನ್ ಆರ್ಮಿ’ ನೇತೃತ್ವದ ಪ್ರತಿಪಕ್ಷ ಗುಂಪುಗಳಿಂದ ದರಾ ವಲಯವನ್ನು ವಶಪಡಿಸಿಕೊಳ್ಳಲು ಸಿರಿಯ ಸರಕಾರಿ ಪಡೆಗಳು ರಶ್ಯ ವಾಯುದಾಳಿ ಬೆಂಬಲದೊಂದಿಗೆ ಕಳೆದ ತಿಂಗಳು ಸೇನಾ ಕಾರ್ಯಾಚರಣೆ ಆರಂಭಿಸಿದ್ದವು. ಈಗಾಗಲೇ ಸಿರಿಯ ಸೇನೆಯು ಈ ವಲಯದ ಬೃಹತ್ ಭೂಭಾಗವನ್ನು ವಶಪಡಿಸಿಕೊಂಡಿದೆ.

ಈ ವಲಯದಲ್ಲಿ ಅಸಾದ್ ಸರಕಾರವನ್ನು ಮತ್ತೆ ಸ್ವೀಕರಿಸುವ ಮೂಲಕ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಪ್ರತಿಪಕ್ಷಗಳ ಪ್ರತಿನಿಧಿಗಳು ರಶ್ಯ ಅಧಿಕಾರಿಗಳೊಂದಿಗೆ ಶನಿವಾರದಿಂದ ಮಾತುಕತೆಯಲ್ಲಿ ತೊಡಗಿದ್ದವು. ಆದರೆ, ಮಾತುಕತೆ ಒಮ್ಮತಕ್ಕೆ ಬರಲು ವಿಫಲವಾಯಿತು.

ಪ್ರತಿಪಕ್ಷ ಪಡೆಗಳು ತಮ್ಮ ಎಲ್ಲ ಭಾರೀ ಶಸ್ತ್ರಾಸ್ತ್ರಗಳನ್ನು ನಿಶ್ಶರ್ತವಾಗಿ ತಕ್ಷಣ ಹಸ್ತಾಂತರಿಸಬೇಕು ಎಂಬುದಾಗಿ ರಶ್ಯ ಅಧಿಕಾರಿಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಂಧಾನ ವಿಫಲವಾಯಿತು ಎಂದು ‘ಫ್ರೀ ಸಿರಿಯನ್ ಆರ್ಮಿ’ಯ ವಕ್ತಾರ ಅಬು ಶೈಮ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News