ದಿಲ್ಲಿ ಸರಕಾರಕ್ಕೆ ಪೊಲೀಸ್ ಅಧಿಕಾರ ಇಲ್ಲ: ಅರುಣ್ ಜೇಟ್ಲಿ

Update: 2018-07-05 14:51 GMT

ಹೊಸದಿಲ್ಲಿ, ಜು. 5: ದಿಲ್ಲಿ ಸರಕಾರಕ್ಕೆ ಪೊಲೀಸ್ ಅಧಿಕಾರ ಇಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ. ಆದುದರಿಂದ ದಿಲ್ಲಿ ಸರಕಾರ ಈ ಹಿಂದೆ ನಡೆದ ಅಪರಾಧಗಳ ತನಿಖೆ ನಡೆಸಲು ತನಿಖಾ ಸಂಸ್ಥೆ ರೂಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.

 ಸುಪ್ರೀಂ ಕೋರ್ಟ್ ಮಂಗಳವಾರ ನೀಡಿದ ತೀರ್ಪಿನಿಂದ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರಕ್ಕೆ ಹೆಚ್ಚಿನ ಯಾವುದೇ ಅಧಿಕಾರ ಸಿಗುತ್ತಿಲ್ಲ ಅಥವಾ ಅಧಿಕಾರ ಯಾವುದೇ ರೀತಿಯಲ್ಲಿ ಇಲ್ಲವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ. ದಿಲ್ಲಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಕೇಂದ್ರಾಡಳಿತ ಪ್ರದೇಶದ ಸೇವಾ ಶ್ರೇಣಿಗಳಿಗೂ ಅನ್ವಯವಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಎಂದು ಅರುಣ್ ಜೇಟ್ಲಿ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

 ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ಎರಡು ಸ್ಪಷ್ಟ ಸೂಚನೆ ಇದೆ ಎಂದು ಹೇಳಿರುವ ಜೇಟ್ಲಿ, ಒಂದು ದಿಲ್ಲಿಗೆ ಪೊಲೀಸ್ ಅಧಿಕಾರ ಇಲ್ಲ. ಈ ಹಿಂದೆ ನಡೆದ ಅಪರಾಧದ ತನಿಖೆ ನಡೆಸಲು ತನಿಖಾ ಸಂಸ್ಥೆ ರೂಪಿಸಲು ಸಾಧ್ಯವಿಲ್ಲ. ಎರಡನೆಯದಾಗಿ ದಿಲ್ಲಿ ಇತರ ರಾಜ್ಯಗಳೊಂದಿಗೆ ಸಮಾನ ಎಂದು ಹೋಲಿಕೆ ಮಾಡುವಂತಿಲ್ಲ. ದಿಲ್ಲಿ ಕುರಿತು ನೀಡಿದ ತೀರ್ಪು ಕೇಂದ್ರಾಡಳಿತ ಪ್ರದೇಶಗಳಿಗೂ ಅನ್ವಯವಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News