×
Ad

ವಿಜಯ್ ಮಲ್ಯ ಬ್ರಿಟನ್ ನಿವಾಸದ ಶೋಧ, ಆಸ್ತಿ ಜಪ್ತಿಗೆ ನ್ಯಾಯಾಲಯದಿಂದ ಅನುಮತಿ

Update: 2018-07-05 20:24 IST

ಲಂಡನ್, ಜು.5: ಮದ್ಯದ ದೊರೆ ವಿಜಯ್ ಮಲ್ಯಾ ಬಾಕಿಯುಳಿಸಿರುವ ಬೃಹತ್ ಸಾಲದ ಮೊತ್ತವನ್ನು ಮರುಪಡೆಯಲು ಬಯಸಿರುವ ಭಾರತದ ಹದಿಮೂರು ಬ್ಯಾಂಕ್‌ಗಳ ಗುಂಪಿನ ಪರವಾಗಿ ತೀರ್ಪು ನೀಡಿರುವ ಬ್ರಿಟನ್ ಉಚ್ಚ ನ್ಯಾಯಾಲಯ ಬ್ರಿಟನ್‌ನಲ್ಲಿರುವ ಮಲ್ಯರ ಮನೆಯನ್ನು ಶೋಧಿಸಲು ಮತ್ತು ಆಸ್ತಿ ಜಪ್ತಿ ಮಾಡಲು ಅನುಮತಿ ನೀಡಿದೆ.

9,000 ಕೋಟಿ ರೂ. ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್ ಮಲ್ಯರನ್ನು ಭಾರತಕ್ಕೆ ಒಪ್ಪಿಸಬೇಕೆಂದು ಭಾರತ ಸರಕಾರ ನ್ಯಾಯಾಲಯದಲ್ಲಿ ಮನವಿ ಮಾಡಿದೆ. ನ್ಯಾಯಾಲಯದ ಈ ಆದೇಶದಿಂದ 62ರ ಹರೆಯದ ಮಲ್ಯರ ಲಂಡನ್ ಸಮೀಪದ ಹರ್ಟ್‌ಫೊರ್ಡ್‌ಶೈರ್‌ನಲ್ಲಿರುವ ಆಸ್ತಿಗೆ ಪ್ರವೇಶ ಪಡೆಯುವ ಅನುಮತಿಯನ್ನು ಯುಕೆ ಉಚ್ಚ ನ್ಯಾಯಾಲಯ ಜಾರಿ ಅಧಿಕಾರಿಗೆ ನೀಡಿದಂತಾಗಿದೆ. ಸದ್ಯ ಟೆವಿನ್‌ನಲ್ಲಿ ಮಲ್ಯ ವಾಸವಿರುವ ಲೇಡಿವಾಕ್ ಮತ್ತು ಬ್ರಾಂಬಲ್ ವಸತಿಗೃಹವನ್ನು ಶೋಧಿಸಲು ಅಧಿಕಾರಿಗಳಿಗೆ ನ್ಯಾಯಾಲಯದ ಆದೇಶ ಅನುಮತಿ ನೀಡುತ್ತದೆ.

ಬ್ಯಾಂಕ್‌ಗಳು ತಮಗೆ ಬರಬೇಕಾದ ಅಂದಾಜು ಮೊತ್ತ 1.145 ಬಿಲಿಯನ್ ಪೌಂಡನ್ನು ಪಡೆಯಲು ಈ ಆದೇಶವನ್ನು ಆಧಾರವಾಗಿ ಬಳಸಬಹುದಾಗಿದೆ. ಈ ಆದೇಶವು ಬ್ರಿಟನ್ ಟ್ರಿಬ್ಯುನಲ್ ನ್ಯಾಯಾಲಯಗಳ ಮತ್ತು ಜಾರಿ ಕಾಯ್ದೆ 2007ಕ್ಕೆ ಸಂಬಂಧಪಟ್ಟಿದೆ. ಜೊತೆಗೆ, ಮಲ್ಯರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು ಎಂಬ ಆದೇಶವನ್ನು ರದ್ದುಗೊಳಿಸಲು ನಿರಾಕರಿಸುತ್ತಾ, ಬ್ಯಾಂಕ್‌ಗಳು ತಮ್ಮ ಹಣವನ್ನು ಪಡೆಯಲು ಬದ್ಧವಾಗಿವೆ ಎಂಬ ಭಾರತೀಯ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಬ್ರಿಟನ್ ಉಚ್ಚ ನ್ಯಾಯಾಲಯ ಮೇಯಲ್ಲಿ ನೀಡಿದ ಆದೇಶಕ್ಕೆ ಪೂರಕವಾಗಿದೆ.

ಮಲ್ಯರ 159 ಸೊತ್ತು ಗುರುತಿಸಲಾಗಿದೆ

ಮದ್ಯದ ದೊರೆ ವಿಜಯ ಮಲ್ಯ ಅವರಿಗೆ ಸೇರಿದ 159 ಸೊತ್ತುಗಳನ್ನು ಗುರುತಿಸಲಾಗಿದೆ. ಆದರೆ, ಜಾರಿ ನಿರ್ದೇಶನಾಲಯ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಎಫ್‌ಇಆರ್‌ಎ) ಉಲ್ಲಂಘನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆಗೆ ಅವರ ಯಾವುದೇ ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ ಎಂದು ಬೆಂಗಳೂರು ಪೊಲೀಸರು ದಿಲ್ಲಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ.

ಮಲ್ಯ ಅವರ ಕೆಲವು ಸೊತ್ತುಗಳನ್ನು ಮುಂಬೈ ವಲಯದ ಜಾರಿ ನಿರ್ದೇಶನಾಲಯ ಈಗಾಗಲೇ ಮಲ್ಯ ಅವರ ಸೊತ್ತನ್ನು ಮುಟ್ಟಗೋಲು ಹಾಕಿಕೊಂಡಿರುವುದರಿಂದ ಇನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ. ಉಳಿದ ಸೊತ್ತಿನ ನಗದೀಕರಣ ಪ್ರಕ್ರಿಯೆ ನಡೆಯುತ್ತಿದೆ ಎಂದು ಬೆಂಗಳೂರು ಪೊಲೀಸರು ಜಾರಿ ನಿರ್ದೇಶನಾಲಯದ ಮೂಲಕ ಮುಖ್ಯ ಮೆಟ್ರೋಪಾಲಿಟಿನ್ ಮ್ಯಾಜಿಸ್ಟೇಟ್ ದೀಪಕ್ ಶೆರಾವತ್ ಅವರಿಗೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News