ಸಿಂಧು, ಪ್ರಣಯ್ ಕ್ವಾರ್ಟರ್‌ಫೈನಲ್‌ಗೆ
ಜಕಾರ್ತ, ಜು.5: ಇಂಡೋನೇಶ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ಎಚ್.ಎಸ್.ಪ್ರಣಯ್ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.
ಇಲ್ಲಿ ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ವಿಶ್ವದ ನಂ.3ನೇ ಆಟಗಾರ್ತಿ ಸಿಂಧು ಜಪಾನ್‌ನ ಆಯಾ ಒಹೊರಿ ಅವರನ್ನು 36 ನಿಮಿಷಗಳ ಹೋರಾಟದಲ್ಲಿ 21-17, 21-14 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ.
ಗುರುವಾರ 23ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸಿಂಧು ಜಪಾನ್ ಆಟಗಾರ್ತಿಯ ವಿರುದ್ಧ ಆಡಿರುವ ಐದನೇ ಪಂದ್ಯವನ್ನು ಗೆದ್ದುಕೊಂಡು ಅಜೇಯ ದಾಖಲೆ ಕಾಯ್ದುಕೊಂಡಿದ್ದಾರೆ.
ಕಳೆದ ವಾರ ಮಲೇಶ್ಯಾ ಓಪನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿದ್ದ ‘ಬರ್ತ್‌ಡೇ ಗರ್ಲ್’ ಸಿಂಧು ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್‌ನ ಬುಸನನ್ ಅಥವಾ ಚೀನಾದ ಹೀ ಬಿಂಗ್‌ಜಿಯಾವೊರನ್ನು ಎದುರಿಸಲಿದ್ದಾರೆ.
ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಪ್ರಣಯ್ ಮೊದಲ ಗೇಮ್ ಸೋಲಿನಿಂದ ಹೊರಬಂದು ಚೈನೀಸ್ ತೈಪೆಯ ವಾಂಗ್ ಝು ವೀ ಅವರನ್ನು ಮೂರು ಗೇಮ್‌ಗಳ ಅಂತರದಿಂದ ಮಣಿಸಿದರು.
ಒಂದು ಗಂಟೆ ಕಾಲ ಪ್ರಿ-ಕ್ವಾರ್ಟರ್ ಫೈನಲ್ ಕಾದಾಟದಲ್ಲಿ ಪ್ರಣಯ್ ಅವರು ವಾಂಗ್‌ರನ್ನು 21-23, 21-15, 21-13 ಗೇಮ್‌ಗಳ ಅಂತರದಿಂದ ಮಣಿಸಿದ್ದಾರೆ. ಪ್ರಣಯ್ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ, ಆಲ್ ಇಂಗ್ಲೆಂಡ್ ಚಾಂಪಿಯನ್ ಶಿ ಯೂಖಿಯವರನ್ನು ಎದುರಿಸಲಿದ್ದಾರೆ.
ಈ ವರ್ಷ ಸ್ವಿಸ್ ಓಪನ್ ಚಾಂಪಿಯನ್ ಆಗಿದ್ದ ಸಮೀರ್ ವರ್ಮಾ ಡೆನ್ಮಾರ್ಕ್‌ನ ಹಾಲಿ ವಿಶ್ವ ಚಾಂಪಿಯನ ವಿಕ್ಟರ್ ಅಕ್ಸೆಲ್‌ಸನ್ ವಿರುದ್ಧ 15-21, 14-21 ಗೇಮ್‌ಗಳ ಅಂತರದಿಂದ ಸೋತಿದ್ದಾರೆ. ಸೈನಾಗೆ ಸೋಲು: ಇದೇ ವೇಳೆ ಮಹಿಳೆಯರ ಸಿಂಗಲ್ಸ್‌ನ ಮತ್ತೊಂದು ಪಂದ್ಯದಲ್ಲಿ ಒಲಿಂಪಿಕ್ಸ್ ಮೆಡಲಿಸ್ಟ್ ಸೈನಾ ನೆಹ್ವಾಲ್ ಚೀನಾದ ಚೆನ್ ಯುಫಿ ವಿರುದ್ಧ 18-21, 15-21 ಗೇಮ್‌ಗಳಿಂದ ಸೋತಿದ್ದಾರೆ.
ವರ್ಷಾರಂಭದಲ್ಲಿ ಜಕಾರ್ತ ದಲ್ಲಿ ನಡೆದ ಇಂಡೋನೇಶ್ಯಾ ಮಾಸ್ಟರ್ಸ್‌ನಲ್ಲಿ ಚೀನಾದ ವಿಶ್ವ ನಂ.5ನೇ ಆಟಗಾರ್ತಿ ಚೆನ್‌ರನ್ನು ಮಣಿಸಿದ್ದ ಸೈನಾ ಗುರುವಾರ ನಡೆದ 40 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಲು ವಿಫಲರಾದರು.