ಫೆಡರರ್ 3ನೇ ಸುತ್ತಿಗೆ ಲಗ್ಗೆ, ವಾವ್ರಿಂಕ ಹೊರಕ್ಕೆ

Update: 2018-07-05 18:26 GMT

ಲಂಡನ್, ಜು.5: ಅಗ್ರ ಶ್ರೇಯಾಂಕದ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಇಲ್ಲಿ ಬುಧವಾರ ನಡೆದ ಪುರುಷರ ಸಿಂಗಲ್ಸ್‌ನ ಎರಡನೇ ಸುತ್ತಿನ ಪಂದ್ಯದಲ್ಲಿ ಸ್ವಿಸ್ ಆಟಗಾರ ಫೆಡರರ್ ಸ್ಲೋವಾಕಿಯದ ಲುಕಾಸ್ ಲಾಕೊರನ್ನು 6-4, 6-4, 6-1 ಸೆಟ್‌ಗಳಿಂದ ಮಣಿಸಿದ್ದಾರೆ. 36ರ ಹರೆಯದ ಫೆಡರರ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಸತತ 26ನೇ ಸೆಟ್‌ನ್ನು ಗೆದ್ದುಕೊಂಡಿದ್ದಾರೆ. ಫೆಡರರ್ ಮುಂದಿನ ಸುತ್ತಿನಲ್ಲಿ ಜರ್ಮನಿಯ ಜಾನ್-ಲೆನಾರ್ಡ್ ಸ್ಟರ್ಫ್‌ರನ್ನು ಎದುರಿಸಲಿದ್ದಾರೆ. ಸ್ಟರ್ಫ್ ಕ್ರೊವೇಶಿಯದ ಇವೊ ಕಾರ್ಲೊವಿಕ್‌ರನ್ನು ಐದು ಸೆಟ್‌ಗಳಿಂದ ಮಣಿಸಿದ್ದಾರೆ. ವಾವ್ರಿಂಕಗೆ ಫ್ಯಾಬಿಯಾನೊ ಶಾಕ್

: ಸ್ವಿಸ್‌ನ ಹಿರಿಯ ಆಟಗಾರ ಸ್ಟಾನ್ ವಾವ್ರಿಂಕ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿದರು. ಗುರುವಾರ ನಡೆದ ವಿಂಬಲ್ಡನ್‌ನ ಎರಡನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಇಟಲಿಯ ಥಾಮಸ್ ಫ್ಯಾಬಿಯಾನೊ ವಿರುದ್ಧ 7-6(7), 6-3, 7-6(6) ಸೆಟ್‌ಗಳಿಂದ ಸೋತಿದ್ದಾರೆ. ಪ್ರತಿಕೂಲ ವಾತಾವರಣದಿಂದ ಗುರುವಾರ ಮುಂದುವರಿದ ಪಂದ್ಯದಲ್ಲಿ ಮೂರು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವಾವ್ರಿಂಕ ಎರಡು ಸೆಟ್ ಹಿನ್ನಡೆಯಿಂದ ಹೋರಾಟ ಮುಂದುವರಿಸಿದರು. 29ರ ಹರೆಯದ ಫ್ಯಾಬಿಯಾನೊ, ವಾವ್ರಿಂಕಗೆ ಸೋಲುಣಿಸಿ ವೃತ್ತಿಜೀವನದ ದೊಡ್ಡ ಗೆಲುವು ದಾಖಲಿಸಿದರು.

ಕಳೆದ ವರ್ಷ ಫ್ರೆಂಚ್ ಓಪನ್ ಫೈನಲ್‌ಗೆ ತಲುಪಿದ ಬಳಿಕ ವಾವ್ರಿಂಕ ಮಂಡಿನೋವಿನಿಂದಾಗಿ ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದಾರೆ. 3ನೇ ರ್ಯಾಂಕಿನಿಂದ 224ನೇ ರ್ಯಾಂಕಿಗೆ ಕುಸಿದಿದ್ದಾರೆ.

ಈ ವರ್ಷದ ಫ್ರೆಂಚ್ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿ ಸೋತಿರುವ ವಾವ್ರಿಂಕ ಆಸ್ಟ್ರೇಲಿಯನ್ ಓಪನ್‌ನಲ್ಲಿ 2ನೇ ಸುತ್ತಿನಲ್ಲಿ ಎಡವಿದ್ದರು. ಕಳೆದ ವರ್ಷ ವಿಂಬಲ್ಡನ್‌ನಲ್ಲಿ ಕೂಡ ಮೊದಲ ಸುತ್ತಿನಲ್ಲಿ ಸೋತಿದ್ದ ವಾವ್ರಿಂಕ ಯುಎಸ್ ಓಪನ್‌ನಲ್ಲಿ ಆಡಿರಲಿಲ್ಲ.

ಮೂರನೇ ಸುತ್ತಿಗೆ ತಲುಪಿರುವ 133ನೇ ರ್ಯಾಂಕಿನ ಫ್ಯಾಬಿಯಾನೊ ಗ್ರೀಸ್‌ನ ಸ್ಟೆಫಾನೊಸ್ ಸಿಟ್‌ಸಿಪಾಸ್‌ರನ್ನು ಎದುರಿಸಲಿದ್ದಾರೆ.

ದ.ಆಫ್ರಿಕದ ಕೆವಿನ್ ಆ್ಯಂಡರ್ಸನ್ ಇಟಲಿಯ ಆ್ಯಂಡ್ರಿಯಸ್ ಸಿಪ್ಪಿ ಅವರನ್ನು 6-3, 6-7(5), 6-3, 6-4 ಸೆಟ್‌ಗಳಿಂದ ಮಣಿಸಿದರು. ಮುಂದಿನ ಸುತ್ತಿನಲ್ಲಿ ಜರ್ಮನಿಯ ಫಿಲಿಪ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News