×
Ad

ಕೊಲಂಬಿಯ ಫುಟ್ಬಾಲ್ ಆಟಗಾರರಿಗೆ ಜೀವಬೆದರಿಕೆ

Update: 2018-07-05 23:57 IST

ಮಾಸ್ಕೊ, ಜು.5: ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್‌ನ ಅಂತಿಮ-16ರ ಸುತ್ತಿನಲ್ಲಿ ಇಂಗ್ಲೆಂಡ್ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲನುಭವಿಸಿದ್ದ ಕೊಲಂಬಿಯದ ಚೊಚ್ಚಲ ವಿಶ್ವಕಪ್ ಕನಸು ಭಗ್ನವಾಗಿತ್ತು. ವಿಶ್ವಕಪ್‌ನಲ್ಲಿ ಈತನಕ ಪೆನಾಲ್ಟಿ ಶೂಟೌಟ್‌ನಲ್ಲಿ ಯಶಸ್ಸು ಕಾಣದ ಇಂಗ್ಲೆಂಡ್ ತಂಡ ಈ ಬಾರಿ ಆ ಅಪವಾದ ದಿಂದ ಮುಕ್ತವಾಗಿ ಕೊಲಂಬಿಯಾವನ್ನು 4-3 ಅಂತರದಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿತ್ತು. ಪೆನಾಲ್ಟಿ ಶೂಟೌಟ್‌ನಲ್ಲಿ ಮ್ಯಾಥ್ಯೂ ಉರಿಬಿ ಹಾಗೂ ಕಾರ್ಲೊಸ್ ಬಾಕಾ ಚೆಂಡನ್ನು ಗೋಲುಪೆಟ್ಟಿಗೆಗೆ ತಲುಪಿಸಲು ವಿಫಲರಾಗಿದ್ದರು. ಪಂದ್ಯ ಕೊನೆಗೊಂಡ ಕೆಲವೇ ನಿಮಿಷಗಳಲ್ಲಿ ಈ ಇಬ್ಬರು ಆಟಗಾರರಿಗೆ ಉದ್ರಿಕ್ತ ಕೊಲಂಬಿಯಾದ ಫುಟ್ಬಾಲ್ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಅವಮಾನಿಸುವ ಜೊತೆಗೆ ಜೀವ ಬೆದರಿಕೆ ಹಾಕಿದ್ದಾರೆ.

ಉರಿಬಿ ಹೊಡೆದ ಚೆಂಡು ಕ್ರಾಸ್‌ಬಾರ್‌ಗೆ ತಾಗಿತ್ತು. ಬಾಕಾ ಬಾರಿಸಿದ್ದ ಚೆಂಡನ್ನು ಇಂಗ್ಲೆಂಡ್ ಗೋಲ್‌ಕೀಪರ್ ಜೋರ್ಡನ್ ಪಿಕ್‌ಫೋರ್ಡ್ ತಡೆದಿದ್ದರು.

ಈ ಇಬ್ಬರು ಆಟಗಾರರು ನಮ್ಮ ಪಾಲಿಗೆ ಸತ್ತುಹೋಗಿದ್ದಾರೆ. ಈ ಇಬ್ಬರನ್ನು ಕೊಲ್ಲಬೇಕು. ಇವರು ಕೊಲಂಬಿಯಾಕ್ಕೆ ವಾಪಸು ಬರಬಾರದು ಎಂದು ಫುಟ್ಬಾಲ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಕೊಲಂಬಿಯಾದ ಮಾಜಿ ಫುಟ್ಬಾಲ್ ಆಟಗಾರ ಆ್ಯಂಡ್ರೆಸ್ ಎಸ್ಕೊಬಾರ್ ನಿಧನರಾಗಿ 24ನೇ ವರ್ಷ ಸಂದ ದಿನವೇ ಕೊಲಂಬಿಯಾ ಆಟಗಾರರಿಗೆ ಜೀವ ಬೆದರಿಕೆ ಬಂದಿದೆ. 1994ರಲ್ಲಿ ಅಮೆರಿಕದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಎಸ್ಕೊಬಾರ್ ಅವರ ಸ್ವಯಂ ಗೋಲು ಕೊಲಂಬಿಯಾ ತಂಡ ನಾಕೌಟ್ ಹಂತದಿಂದ ಹೊರ ನಡೆಯಲು ಕಾರಣವಾಗಿತ್ತು. ಸೆಲ್ಫ್ ಗೋಲು ಬಾರಿಸಿದ 10 ದಿನಗಳ ಬಳಿಕ ಎಸ್ಕೊಬಾರ್‌ರನ್ನು ಗುಂಡಿಟ್ಟು ಸಾಯಿಸಲಾಗಿತ್ತು. ಈ ಘಟನೆ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು.

ವಿಶ್ವಕಪ್‌ನಲ್ಲಿ ಜೀವಬೆದರಿಕೆ ಘಟನೆ ನಡೆದಿರುವುದು ಇದೇ ಮೊದಲಲ್ಲ. ಪ್ರಸ್ತುತ ವಿಶ್ವಕಪ್‌ನಲ್ಲಿ ಕೊಲಂಬಿಯಾ ತಂಡ ಜಪಾನ್ ವಿರುದ್ಧ ಮೊದಲ ಗ್ರೂಪ್ ಪಂದ್ಯ ಆಡಿದ್ದ ಸಂದರ್ಭದಲ್ಲಿ ಪಂದ್ಯದ ಮೂರನೇ ನಿಮಿಷದಲ್ಲಿ ರೆಡ್ ಕಾರ್ಡ್ ಪಡೆದಿದ್ದ ಡಿಫೆಂಡರ್ ಕಾರ್ಲೊಸ್ ಸ್ಯಾಂಚೆಝ್‌ಗೆ ಜೀವಬೆದರಿಕೆ ಬಂದಿತ್ತು. ಈ ವಿಚಾರದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News