4 ವರ್ಷಗಳಲ್ಲಿ ಜಿಲ್ಲೆಗೆ ಬಂದ ಕೇಂದ್ರ ಅನುದಾನದ ಲೆಕ್ಕ ಕೊಡಿ: ಪ್ರಮೋದ್ ಮಧ್ವರಾಜ್

Update: 2018-07-06 17:10 GMT

ಉಡುಪಿ, ಜು.6: ಬಜೆಟ್‌ನಲ್ಲಿ ಮುಖ್ಯಮಂತ್ರಿ ಜಿಲ್ಲೆಯಲ್ಲಿ ಅಭಿವೃದ್ಧಿ ಯೋಜನೆಯನ್ನು ಪ್ರಕಟಿಸಿಲ್ಲ ಎಂದು ಇಂದು ವಿಧಾನಸೌಧದ ಎದುರು ಪ್ರತಿಭಟನೆಯ ನಾಟಕವಾಡಿದ ಜಿಲ್ಲೆಯ ಬಿಜೆಪಿ ಶಾಸಕರು ಮೊದಲು ಕಳೆದ ನಾಲ್ಕು ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರ ಜಿಲ್ಲೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯ ಹಾಗೂ ಬಿಡುಗಡೆ ಮಾಡಿದ ಅನುದಾನದ ಲೆಕ್ಕವನ್ನು ಕೊಡಲಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸವಾಲು ಹಾಕಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಅಭಿವೃದ್ಧಿಯ ಮಾತನಾಡದೇ ಕೇವಲ ಹಿಂದುತ್ವ ಹಾಗೂ ಮೋದಿಯ ಹೆಸರಿನಲ್ಲಿ ಮತ ಯಾಚಿಸಿದ ಈ ಶಾಸಕರು, ಈಗ ಅಭಿವೃದ್ಧಿಯ ಹೆಸರಿನಲ್ಲಿ ವಿಧಾನಸೌಧದ ಎದುರು ಧರಣಿ ನಡೆಸಿ ಪ್ರಚಾರ ಗಿಟ್ಟಿಸಲು ಪ್ರಯತ್ನಿಸುತಿದ್ದಾರೆ ಎಂದು ಟೀಕಿಸಿದರು.

ಬಜೆಟ್‌ನಲ್ಲಿ ಜಿಲ್ಲೆಗೆ ಏನೂ ನೀಡಿಲ್ಲ ಎಂದು ಹೇಳುವವರು, ಕೇವಲ ಎರಡು ದಿನಗಳ ಹಿಂದೆ ಜಿಲ್ಲೆಯ ಅಭಿವೃದ್ಧಿ ಕೆಲಸದ ಪಟ್ಟಿ ಹಿಡಿದುಕೊಂಡು ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡುತಿದ್ದರೇ ಎಂದು ಪ್ರಶ್ನಿಸಿದ ಪ್ರಮೋದ್, ಇದು ಅವರು ಜಿಲ್ಲೆಯ ಅಭಿವೃದ್ಧಿ ಕುರಿತಂತೆ ಗಂಭೀರ ವಾಗಿಲ್ಲ ಎಂಬುದನ್ನು ತೋರಿಸುತ್ತದೆ. ಅಭಿವೃದ್ಧಿ ಕುರಿತು ಚುನಾವಣೆ ಪೂರ್ವದಲ್ಲಿ ತೋರಿಸಿದ ಅಸಡ್ಡೆಯನ್ನೇ ಈಗಲೂ ತೋರಿಸುತಿದ್ದಾರೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ ಎಂದರು.

ಕಳೆದ ನಾಲ್ಕು ವರ್ಷಗಳಲ್ಲಿ ಕೇಂದ್ರದಿಂದ ಎಷ್ಟು ಅನುದಾನ ತಂದಿದ್ದಾರೆ ಎಂಬುದರ ಲೆಕ್ಕ ನೀಡಲಿ. ಅಭಿವೃದ್ಧಿಗೆ ಅತೀ ಮುಖ್ಯವಾದ ಮಲ್ಪೆ- ಆದಿಉಡುಪಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕೆಲಸ ಯಾವುದೂ ಕಳೆದ ನಾಲ್ಕೂವರೆ ವರ್ಷಗಳಿಂದ ಏನೂ ಪ್ರಾರಂಭಗೊಂಡಿಲ್ಲ. ಈ ಬಗ್ಗೆ ಕೇಂದ್ರ ಸರಕಾರ ದಿವ್ಯ ನಿರ್ಲಕ್ಷ್ಯವನ್ನು ತಳೆದಿದೆ. ಭೂಸ್ವಾಧೀನ ಇನ್ನೂ ಪ್ರಾರಂಭವಾಗಿಲ್ಲ. ಇವರು ಮಾತಿನಲ್ಲೇ ಕಾಲಹರಣ ಮಾಡುತಿದ್ದಾರೆ ಎಂದು ದೂರಿದರು.

ತನ್ನ ಶಾಸಕ ಅವಧಿಯಲ್ಲಿ ಜಿಲ್ಲೆ ಅಭಿವೃದ್ಧಿಗೆ 2026 ಕೋಟಿ ರೂ.ಗಳ ಅನುದಾನವನ್ನು ತಂದಿದ್ದು, ಪ್ರತಿಯೊಂದರ ವಿವರಗಳನ್ನು ಪ್ರತಿ ಮನೆಗೂ ಮುಟ್ಟಿಸಿದ್ದೇನೆ. ಪಡುವರಿಯಲ್ಲಿ 720ಮೀ. ಸಮುದ್ರ ತಡೆಗೋಡೆ ನಿರ್ಮಾಣಕ್ಕೆ 9 ಕೋಟಿ, ತೆಂಕನಿಡಿಯೂರಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ 7.5 ಕೋಟಿ ರೂ. ಸೇರಿದಂತೆ ಜಿಲ್ಲೆಯಲ್ಲಿ ಸಮುದ್ರ ತಡೆಗೋಡೆ ನಿರ್ಮಾಣಕ್ಕೆ 120 ಕೋಟಿ ರೂ.ಮಂಜೂರಾಗಿದೆ ಎಂದರು.

ತಾನು ಮಂಜೂರು ಮಾಡಿಸಿದ ಕೆಲವು ರಸ್ತೆ ಕಾಮಗಾರಿಗಳಿಗೆ ಈಗಿನ ಶಾಸಕರು ತಡೆ ಒಡ್ಡುವ ಕೆಲಸ ಮಾಡುತಿದ್ದಾರೆ ಎಂದು ತನಗೆ ತಿಳಿದುಬಂದಿದೆ. ಇಂಥ ಕೆಲಸಕ್ಕೆ ಅವರು ಕೈಹಾಕಬಾರದು. ತಾನು ಮಂಜೂರು ಮಾಡಿಸಿರುವ 2026 ಕೋಟಿ ರೂ.ಗಳ ಉಳಿದ ಕಾಮಗಾರಿಗಳು ಅನುಷ್ಠಾನಗೊಳ್ಳುವಂತೆ ಅವರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಡುಕೆರೆಗೆ ಜಟ್ಟಿ ನಿರ್ಮಾಣಕ್ಕೆ 10 ಕೋಟಿ ರೂ., ಸ್ಲೀಪ್‌ವೇ ನಿರ್ಮಾಣಕ್ಕೆ ಟೆಬ್ಮಾ ಮೂಲಕ 80 ಲಕ್ಷ ರೂ. ಅನುದಾನ ಮಂಜೂರಾಗಿದೆ. ಮೀನುಗಾರರಿಗೆ ಮಾರ್ಚ್ ತಿಂಗಳವರೆಗಿನ ಡೀಸೆಲ್ ಸಬ್ಸಿಡಿ ಸಂಪೂರ್ಣವಾಗಿ ಪಾವತಿಯಾಗಿದೆ. ಇದೀಗ ಇನ್ನೂ ಮೂರು ತಿಂಗಳ ಸಬ್ಸಿಡಿ ಹಣ ಬಿಡುಗಡೆ ಗೊಂಡಿದ್ದು, ಶೀಘ್ರವೇ ಮೀನುಗಾರರ ಖಾತೆಗಳಿಗೆ ಜಮಾಗೊಳ್ಳಲಿದೆ ಎಂದು ಪ್ರಮೋದ್ ನುಡಿದರು.

ಬಿಜೆಪಿ ಎಷ್ಟೇ ಹಿಂದುತ್ವದ ಪರವಾಗಿ ಮಾತನಾಡಿದರೂ, ಈ ಬಾರಿ ಹಿಂದುತ್ವದ ಪರ ಬಜೆಟ್ ಮಂಂಡಿಸಿರುವುದು ಕುಮಾರಸ್ವಾಮಿ, ಅವರು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಯ ಘೋಷಣೆ ಮಾಡಿದ್ದು, 25 ಕೋಟಿ ರೂ.ವನ್ನು ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರಾದ ನರಸಿಂಹ ಮೂರ್ತಿ, ದಿನೇಶ್ ಸುವರ್ಣ, ಭಾಸ್ಕರ ರಾವ್ ಕಿದಿಯೂರು, ಮೀನಾಕ್ಷಿ ಮಾಧವ ಬನ್ನಂಜೆ, ಸತೀಶ್ ಅಮೀನ್ ಪಡುಕೆರೆ ಹಾಗೂ ಜನಾರ್ದನ ಭಂಡಾರ್‌ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News