ಮಸೀದಿಗಳ ಪ್ರಾರ್ಥನೆಯನ್ನು ಮಾನ್ಯ ಮಾಡದಿದ್ದರೆ ಇಸ್ಲಾಂ ಸಮಾಪ್ತಿಯಾಗಬಹುದು: ಸುಪ್ರೀಂಗೆ ನಿವೇದನೆ

Update: 2018-07-06 17:20 GMT

ಹೊಸದಿಲ್ಲಿ, ಜು.6: ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುವುದು ಧರ್ಮದ ಅವಿಭಾಜ್ಯ ಅಂಗ ಎಂದು ಪರಿಗಣಿಸದಿದ್ದರೆ ಇಸ್ಲಾಂ ಸಮಾಪ್ತಿಯಾಗಬಹುದು ಎಂದು ಮುಸ್ಲಿಮರ ತಂಡವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಬಾಬ್ರಿ ಮಸೀದಿ-ರಾಮ ಜನ್ಮಭೂಮಿ ವಿವಾದದ ವಿಚಾರಣೆಯನ್ನು ಶುಕ್ರವಾರ ಸುಪ್ರೀಂಕೋರ್ಟ್ ಪುನರಾರಂಭಿಸಿದ್ದು, ಈ ಸಂದರ್ಭ ಮುಸ್ಲಿಮರ ತಂಡದ ಪರ ವಕೀಲ ರಾಜೀವ್ ಧವನ್ ಹೇಳಿಕೆ ನೀಡಿ, 1994ರಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಬಾಬ್ರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮುಸ್ಲಿಮರ ಹಕ್ಕನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುವುದು ಧರ್ಮದ ಅವಿಭಾಜ್ಯ ಅಂಗ ಎಂದು ಪರಿಗಣಿಸದಿದ್ದರೆ ಇಸ್ಲಾಂ ಸಮಾಪ್ತಿಯಾಗಬಹುದು ಎಂದರು. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುವುದು ಇಸ್ಲಾಂನ ಅವಿಭಾಜ್ಯ ಮತ್ತು ಪ್ರಮುಖ ಭಾಗವಾಗಿಲ್ಲ ಎಂದು ಸುಪ್ರೀಂ ನೀಡಿದ ತೀರ್ಪಿನಲ್ಲಿ ತಿಳಿಸಲಾಗಿತ್ತು.

ವಿವಾದಾಸ್ಪದ ಭೂಮಿಯಲ್ಲಿ ಸ್ಥಾಪಿಸಲಾಗಿರುವ ರಾಮನ ವಿಗ್ರಹದ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ತಿಳಿಸಿದ್ದ ಸುಪ್ರೀಂಕೋರ್ಟ್, ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸುವ ಹಿಂದುಗಳ ಹಕ್ಕನ್ನು ಪರಿಗಣಿಸಿತ್ತು. ಧವನ್ ವಾದಕ್ಕೆ ಪ್ರತಿಕ್ರಿಯಿಸಿದ ಹಿಂದೂಗಳ ಗುಂಪಿನ ಪರ ವಕೀಲ ಸಿ.ಎಸ್.ವೈದ್ಯನಾಥನ್ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪಿನ ಮೂಲಕ ಮೂಲವ್ಯಾಜ್ಯವು ಬಗೆಹರಿದಿದೆ ಎಂದರು. 1994ರ ತೀರ್ಪನ್ನು ಆ ಬಳಿಕದ ಯಾವುದೇ ಕಾರ್ಯಕಲಾಪಗಳಲ್ಲೂ ಪ್ರಶ್ನಿಸಲಾಗಿಲ್ಲ ಎಂದು ಉತ್ತರಪ್ರದೇಶ ಸರಕಾರವನ್ನು ಪ್ರತಿನಿಧಿಸುತ್ತಿರುವ ವಕೀಲ ತುಷಾರ್ ಮೆಹ್ತ ಸುಪ್ರೀಂಕೋರ್ಟ್‌ನ ಗಮನಕ್ಕೆ ತಂದರು.

ಬಾಬ್ರಿ ಮಸೀದಿ- ರಾಮಮಂದಿರ ವಿವಾದವನ್ನು ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠಕ್ಕೆ ವಹಿಸಬೇಕೆಂದು ಮುಸ್ಲಿಮ್ ಗುಂಪುಗಳು ಪ್ರಯತ್ನಿಸುತ್ತಿವೆ. ಆದರೆ ಇದನ್ನು ವಿರೋಧಿಸುತ್ತಿರುವ ಹಿಂದೂ ಗುಂಪುಗಳು ಮುಖ್ಯನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವೇ ಈ ಪ್ರಕರಣದ ಬಗ್ಗೆ ತೀರ್ಮಾನ ಕೈಗೊಳ್ಳಬೇಕು ಎಂದು ಬಯಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News